ಮಂಜೇಶ್ವರ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ (ಕೆ.ಎಸ್. ಟಿ.ಎ)ನ ಮಂಜೇಶ್ವರ ಉಪಜಿಲ್ಲಾ ಮಟ್ಟದ 30 ನೇ ವಾರ್ಷಿಕ ಸಮ್ಮೇಳನ 2021 ಜನವರಿ 9 ಶನಿವಾರ ಕೆ.ಎಸ್. ಟಿ.ಎ ಭವನ ಹೊಸಂಗಡಿಯಲ್ಲಿ ಜರಗಿಸಲು ತೀರ್ಮಾನಿಸಲಾಯಿತು.
ಮಂಜೇಶ್ವರ ಕೆ.ಎಸ್.ಟಿ.ಎ ಯ ಉಪಜಿಲ್ಲಾ ಸಮಿತಿ ಸಭೆ ಹೊಸಂಗಡಿಯಲ್ಲಿ ಉಪಜಿಲ್ಲಾ ಅಧ್ಯಕ್ಷ ಗಂಗಾಧರನ್ ಅಡಿಯೋಡಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಮಲಯಾಳಂ ಸಾಹಿತ್ಯ ಕ್ಷೇತ್ರದ ಪ್ರಖ್ಯಾತ ಕವಯತ್ರಿ ಸುಗುತಕುಮಾರಿಯವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ವಿಜಯ ಕುಮಾರ್ ಪಾವಳ ಉಪಜಿಲ್ಲಾ ಸಮ್ಮೇಳನದ ಕರಡು ವರದಿ ಮಂಡನೆ ಮಾಡಿದರು. ಕೋಶಾಧಿಕಾರಿ ವಿಜಯ ಸಿ.ಹೆಚ್ ಲೆಕ್ಕ ಪತ್ರ ಮಂಡಿಸಿದರು. ಚರ್ಚೆ ನಡೆಸಿ ಬೇಕಾದ ತಿದ್ದುಪಡಿಗಳೊಂದಿಗೆ ಅಂಗೀಕರಿಸಲಾಯಿತು. ಸಮ್ಮೇಳನದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಡಿ.30 ರಂದು ನಡೆಸಲು ತೀರ್ಮಾನಿಸಲಾಯಿತು. ಸರ್ಕಾರದ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಸಮ್ಮೇಳನ ವ್ಯವಸ್ಥಿತವಾಗಿ ನಡೆಸಲು ಉಪಸಮಿತಿಗಳನ್ನು ನೇಮಿಸಲಾಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ಯು.ಶ್ಯಾಮ್ ಭಟ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮೋಹನ. ಬಿ, ದಿನೇಶ.ವಿ. ಪ್ರೇಮರಾಜನ್ ಸಲಹೆಗಳನ್ನು ನೀಡಿದರು. ಜೊತೆಕಾರ್ಯದರ್ಶಿ ಅಶ್ರಫ್ ವಂದಿಸಿದರು.