ಮುಳ್ಳೇರಿಯ: ಯಕ್ಷಗಾನ ಗುರುಕುಲದ ರೂವಾರಿ ಕವಿ ಅರ್ಥಧಾರಿ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ ಅವರ ಸಂಸ್ಮರಣೆಯೊಂದಿಗೆ ನೀಡಲಾಗುತ್ತಿರುವ 2019-20 ರ ಕೀರಿಕ್ಕಾಡು ಪ್ರಶಸ್ತಿಗೆ ಖ್ಯಾತ ವಿದ್ವಾಂಸ, ಮುಂಚೂಣಿಯ ಯಕ್ಷಗಾನ ಅರ್ಥಧಾರಿ ಹಿರಿಯ ಪ್ರವಚನಕಾರ ಶ್ರೇಷ್ಠ ಅಧ್ಯಾಪಕ ಬರೆ ಕೇಶವ ಭಟ್ಟರನ್ನು ಆಯ್ಕೆ ಮಾಡಲಾಗಿದೆ.
ಡಿ.30 ರಂದು ಸಂಜೆ 3ಕ್ಕೆ ಜರಗಲಿರುವ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 76ನೇ ವಾರ್ಷಿಕೋತ್ಸವದ ಸಭಾಕಾರ್ಯಕ್ರಮದ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.
ಹಿರಿಯ ಸಹಕಾರಿ ಧುರೀಣ ಊಜಂಪಾಡಿ ನಾರಾಯಣ ನಾೈಕ್ ಅಧ್ಯಕ್ಷತೆ ವಹಿಸುವರು. ಪ್ರಸಿದ್ಧ ವಿದ್ವಾಂಸ ಅರ್ಥಧಾರಿ ವೆಂಕಟರಾಮ ಭಟ್ ಸುಳ್ಯ ಅಭಿನಂದನಾ ಭಾಷಣ ಮಾಡುವರು. ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಉಪಸ್ಥಿತರಿರುವರು. ಪ್ರಶಸ್ತಿ ಫಲಕ, ಅಭಿನಂದನಾ ಪತ್ರ ಮತ್ತು ನಗದು ಸಮರ್ಪಣೆಯೊಂದಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಬರೆ ಕೇಶವ ಭಟ್ ಅವರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದ ಸುಧೀರ್ಘ ಅಧ್ಯಾಪನದಲ್ಲಿ ತೊಡಗಿಕೊಂಡವರು. ಹರಿತ, ಉದ್ಧಾಮ(ಶೇಣಿ ಅಭಿನಂದನಾ ಗ್ರಂಥ) ಮೊದಲಾದ ಕೃತಿಗಳನ್ನು ರಚಿಸಿದವರು. ದಟ್ಟವಾದ ಪುರಾಣಾನುಭವ ಮತ್ತು ಪಾಂಡಿತ್ಯದಿಂದ ಪರಿಪುಷ್ಟವಾದ ಅರ್ಥಗಾರಿಕೆಯಿಂದ ಸ್ವಂತಿಕೆಯನ್ನು ಬೆಳೆಸಿಕೊಂಡು ಪ್ರಸಿದ್ಧರಾದವರು. ಹಿರಿಯ ಗಮಕ ವ್ಯಾಖ್ಯಾನಕಾರರೂ ಆಗಿ ಪರಿಚಿತರಾದವರು.