ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಡಿ.31ರಿಂದ ಜ.9 ವರೆಗೆ ತಡೆಗೋಡೆ ಉತ್ಸವ ಜಿಲ್ಲೆಯ ವಿವಿಧೆಡೆ ನಡೆಯಲಿದೆ.
ಕಾಸರಗೋಡು ಜಿಲ್ಲೆಯ ಎಲ್ಲ ಜಲಾಶಯಗಳಿಗೆ ತಡೆಗೋಡೆ ನಿರ್ಮಿಸುವ ಮೂಲಕ ಗರಿಷ್ಠ ಮಟ್ಟದಲ್ಲಿ ಜಲಸಂರಕ್ಷಣೆ ನಡೆಸುವ ಉದ್ದೇಶದೊಂದಿಗೆ ಇದು ಜರುಗಲಿದೆ. ಕೋವಿಡ್ ಪ್ರತಿರೋಧ ಸಂಹಿತೆ ಗಳನ್ನು ಕಡ್ಡಾಯವಾಗಿ ಪಾಲಿಸಿ ಈ ಪ್ರಕ್ರಿಯೆ ಜರುಗಲಿದೆ. ಈ ನಿಟ್ಟಿನಲ್ಲಿ ಶಾಶ್ವತ, ಅರ್ಧ ಶಾಶ್ವತ, ತಾತ್ಕಾಲಿಕ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಬರಗಾಲ ನಿಯಂತ್ರಣ ಉದ್ದೇಶದಿಂದ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ವರ್ಷ ಡಿ.29ರಿಂದ ಜ.4 ವರೆಗೆ ಕಾಸರಗೋಡು ಜಿಲ್ಲೆಯಲ್ಲಿ ನಡೆಸಿದ್ದ ತಡೆಗೋಡೆ ಉತ್ಸವ ಇತರರಿಗೆ ಮಾದರಿಯಾಗಿತ್ತು. ಮೂರು ವರ್ಷಗಳ ಅವಧಿಯಲ್ಲಿ 6500 ತಡೆಗೋಡೆ ನಿರ್ಮಿಸುವ ಗುರಿ ಇರಿಸಲಾಗಿದೆ. ತ್ರಿಸ್ತರ ಪಂಚಾಯತ್ ನಿಧಿ, ಎಂ.ಜಿ.ಎನ್.ಆರ್.ಇ.ಜಹಿ.ಎಸ್. ನಿಧಿ, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಧಿ, ಇಲಾಖೆಗಳ ಮಟ್ಟದ ನಿಧಿ ಸಹಿತ ನಿಧಿಗಳನ್ನು ಇವಕ್ಕಾಗಿ ಬಳಸಲಾಗುವುದು.
ಕೋವಿಡ್ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಜಲಸಂರಕ್ಷಣೆಯ ಎರಡನೆಯ ಹಂತವಾಗಿ ಜಾರಿಗೊಳಿಸುವ ತಡೆಗೋಡೆ ಉತ್ಸವವನ್ನು ಗ್ರಾಮ ಪಂಚಾಯತ್ ಮತ್ತು ನಗರಸಭೆಗಳಲ್ಲಿ ಸಮಪರ್ಪಕವಾಗಿ ಜಾರಿಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಸ್ಥಳೀಯವಾಗಿ ಲಭಿಸುವ ಕಾಟುಕಲ್ಲು, ಬಿದಿರು, ತೆಂಗಿನಗರಿ, ಮಣ್ಣು ತುಂಬಿದ ಗೋಣಿಚೀಲ ಸಹಿತ ಸಾಮಾಗ್ರಿಗಳನ್ನು ಈ ನಿಟ್ಟಿನಲ್ಲಿ ಬಳಸಲಾಗುವುದು. ಬಾವಿ ರಿಂಗ್, ಮೆಟಲ್ ಶೀಟ್ ಬಳಸಿ ಅರ್ಧ ಸಾಶ್ವತ ತಡೆಗೋಡೆಗಳು, ನೂತ ತಂತ್ರಜ್ಞಾನ ಬಳಸಿ ರಬ್ಬರ್ ಡಾಮ್ ಗಳು 2021 ತಡೆಗೋಡೆ ಉತ್ಸವ ಯೋಜನೆಯಲ್ಲಿ ಅಳವಡಗೊಳ್ಳಲಿವೆ. ಜಿಲ್ಲೆಯ ವಿವಿಧ ಜಲಾಶಯ, ತೋಡುಗಳಲ್ಲಿ 2 ಸಾವಿರದಷ್ಟು ತಡೆಗೋಡೆ ನಿರ್ಮಿಸಿ ಜಲದ ಕ್ಷಾಮವನ್ನು ಒಂದು ಹಂತದ ವರೆಗೆ ಪರಿಹರಿಸಲು ಕಳೆದ ವರ್ಷ ಸಾಧ್ಯವಾಗಿತ್ತು.