ನವದೆಹಲಿ: ತೀವ್ರ ಹಣದುಬ್ಬರದ ಪರಿಸ್ಥಿತಿ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಸತತ ಮೂರನೇ ಬಾರಿ ಕಾಯ್ದುಕೊಂಡಿದ್ದು, ಶೇಕಡಾ 4ರಷ್ಟು ಇರಲಿದೆ. ಇಂದು ತ್ರೈಮಾಸಿಕದ ವಿತ್ತೀಯ ನೀತಿ ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ರಿವರ್ಸ್ ರೆಪೊ ದರವನ್ನು ಸಹ ಬದಲಾವಣೆ ಮಾಡದೆ ಶೇಕಡಾ 3.35ರಷ್ಟು ಯಥಾಸ್ಥಿತಿ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಿಂದ ಆರ್ ಬಿಐ 115 ಬೇಸಿಸ್ ಪಾಯಿಂಟ್ ಗಳಷ್ಟು ರೆಪೊ ದರವನ್ನು ಕಡಿತ ಮಾಡಿತ್ತು.ಕಳೆದ ಮೇ 22ರಂದು ಆರ್ ಬಿಐ ತನ್ನ ವಿತ್ತೀಯ ನೀತಿಯನ್ನು ಪರಿಷ್ಕರಿಸಿತ್ತು.
ಕೋವಿಡ್-19 ಆರ್ಥಿಕ ಕುಸಿತ, ಅಧಿಕ ಹಣದುಬ್ಬರ, ವಿತ್ತೀಯ ದೇಶೀ ಉತ್ಪಾದನೆಗಳ(ಜಿಡಿಪಿ) ಕುಸಿತದಿಂದಾಗಿ ಬಹುತೇಕ ಆರ್ಥಿಕ ತಜ್ಞರು ಈ ಬಾರಿ ಕೂಡ ರೆಪೊ ದರ ಮತ್ತು ರಿವರ್ಸ್ ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದೆ ಯಥಾಸ್ಥಿತಿ ಮುಂದುವರಿಯಬಹುದು ಎಂದು ಹೇಳಿತ್ತು.
ಆರ್ ಬಿಐ, ಜಿಡಿಪಿ ಬೆಳವಣಿಗೆಯನ್ನು 2020-21ನೇ ಆರ್ಥಿಕ ಸಾಲಿನಲ್ಲಿ ಶೇಕಡಾ 9.5ರಿಂದ ಶೇಕಡಾ 7.5ರಷ್ಟಾಗಬಹುದು ಎಂದು ಹೇಳಿದೆ. ಈ ವರ್ಷದ ಮಾರ್ಚ್ ಹೊರತುಪಡಿಸಿ ಪ್ರತಿ ತಿಂಗಳು ಆರ್‌ಬಿಐ ಕಡ್ಡಾಯವಾಗಿ ಶೇಕಡಾ 2-6 ರಷ್ಟು ಗುರಿ ವ್ಯಾಪ್ತಿಯ ಮೇಲೆ ಹಣದುಬ್ಬರವು ಸ್ಥಿರವಾಗಿ ಉಳಿದಿದೆ, ಆದರೆ ಪ್ರಮುಖ ಹಣದುಬ್ಬರವು ಸಹ ಹೆಚ್ಚಾಗಿದೆ.
ರೆಪೊ ದರ: ಬ್ಯಾಂಕುಗಳಲ್ಲಿ ಹಣದ ಕೊರತೆಯಾದರೆ ಅಥವಾ ಹಣದ ಅವಶ್ಯಕತೆಯಿದ್ದರೆ ಆರ್ ಬಿಐ ಬ್ಯಾಂಕುಗಳಿಗೆ ಕೊಡುವ ಸಾಲದ ಹಣದ ಮೇಲೆ ವಿಧಿಸುವ ನಿಶ್ಚಿತ ಬಡ್ಡಿ ದರವಾಗಿದೆ. ಹಣದುಬ್ಬರವನ್ನು ನಿಯಂತ್ರಿಸಲು ವಿತ್ತೀಯ ಅಧಿಕಾರಿಗಳು ರೆಪೊ ದರವನ್ನು ಬಳಸುತ್ತಾರೆ.
ಹಣದುಬ್ಬರದ ಸಂದರ್ಭದಲ್ಲಿ, ಕೇಂದ್ರ ಬ್ಯಾಂಕು ಆರ್ ಬಿಐ ರೆಪೊ ದರವನ್ನು ಹೆಚ್ಚಿಸುತ್ತವೆ, ಸಾಧ್ಯವಾದಷ್ಟು ಬ್ಯಾಂಕುಗಳು ಕೇಂದ್ರ ಬ್ಯಾಂಕಿನಿಂದ ಸಾಲ ಪಡೆಯುವುದನ್ನು ತಡೆಯುತ್ತದೆ. ಇದು ಅಂತಿಮವಾಗಿ ಆರ್ಥಿಕತೆಯಲ್ಲಿ ಹಣ ಪೂರೈಕೆಯನ್ನು ಕಡಿಮೆ ಮಾಡಿ ಹಣದುಬ್ಬರ ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಿವರ್ಸ್ ರೆಪೊ ದರ: ಇದಕ್ಕೆ ಪ್ರತಿಯಾಗಿ ಆರ್‌ಬಿಐ ಅಲ್ಪಾವಧಿಗೆ ಬ್ಯಾಂಕುಗಳಿಂದ ಹಣವನ್ನು ಸಾಲ ಪಡೆದು ಆ ಹಣದ ಮೇಲೆ ನೀಡುವ ಬಡ್ಡಿದರವನ್ನು ರಿವರ್ಸ್ ರೆಪೊ ದರ ಎಂದು ಕರೆಯುತ್ತಾರೆ.