ಮಂಜೇಶ್ವರ : ಹಲವು ನಾಟಕೀಯ ವಿದ್ಯಾಮಾನಗಳ ಬಳಿಕ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮಂಜೇಶ್ವರ ಗ್ರಾ. ಪಂ. ನಲ್ಲಿ ಅಧ್ಯಕ್ಷೆ ಉಪಾಧ್ಯಕ್ಷೆ ಸ್ಥಾನವನ್ನು ಅಲಂಕರಿಸುವುದರೊಂದಿಗೆ ಸುದೀರ್ಘವಾದ 40 ವರ್ಷಗಳ ಕಾಲ ಆಡಳಿತವನ್ನು ನಡೆಸಿದ ಯುಡಿಎಫ್ ಜನಪ್ರತಿನಿಧಿಗಳಿಗೆ ಅಡಳಿತ ಚುಕ್ಕಾಣಿ ಯಾರಿಗೂ ಶಾಶ್ವತವಲ್ಲ ಎಂಬುದನ್ನು ಸ್ವತಂತ್ರರು ತೋರಿಸಿ ಕೊಟ್ಟಿದ್ದಾರೆ.
ಮಂಜೆಶ್ವರ ಗ್ರಾ. ಪಂ. 15 ನೇ ವಾರ್ಡಿನಲ್ಲಿ ಸ್ವತಂತ್ರವಾಗಿ ನಿಂತು ಜನಮನಗೆದ್ದು ಗೆಲುವನ್ನು ಪಡೆದ ಜೀನ್ ಲವಿನಾ ಮೊಂತೇರೋ ಪಂ. ಅಧ್ಯಕ್ಷೆಯಾಗಿ ಹಾಗೂ ಲೀಗಿನ ಭದ್ರಕೋಟೆಯಲ್ಲಿ ಲೀಗಿನ ವಿರುದ್ದ ಸ್ವತಂತ್ರನಾಗಿ ನಿಂತು ಗೆಲುವನ್ನು ಪಡೆದ ರಫೀಕ್ ಉಪಾಧ್ಯಕ್ಷರಾಗಿ ಆಯ್ಕೆ ಗೊಂಡಿದ್ದಾರೆ. ಅಧ್ಯಕ್ಷೆ ಪದವಿಗೆ ನಡೆದ ಚುನಾವಣೆಯಲ್ಲಿ ಆರು ಬಿಜೆಪಿ ಸದಸ್ಯರ ಹಾಗೂ ಇಬ್ಬರು ಸ್ವತಂತ್ರ ಸದಸ್ಯರ ಮತದಾನದಿಂದ ಜೀನ್ ಲವಿನಾ ಮೊಂತೇರೋ 9 ಮತಗಳ ಅಂತರದಲ್ಲಿ ಗೆಲುವನ್ನು ಪಡೆದಿದ್ದಾರೆ.
ಸ್ವತಂತ್ರ ಸದಸ್ಯರು ವ್ಯಕ್ತಿತ್ವವನ್ನು ಗುರುತಿಸಿ ಅಧ್ಯಕ್ಷೆ ಆಯ್ಕೆ ನಡೆಸಿರುವುದು ಹೊರತು ಬಿಜೆಪಿಯನ್ನು ಬೆಂಬಲಿಸಿಲ್ಲವೆಂಬುದಾಗಿ ಅವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಇಲ್ಲಿ ಯುಡಿಎಫ್ ಅಭ್ಯರ್ಥಿ ಮುಂತಾಸ್ ಸಮೀರಾ 8 ಮತಗಳನ್ನು ಪಡೆದರೆ ಉಳಿದ ಇಬ್ಬರು ಎಸ್ ಡಿ ಪಿ ಐ ಹಾಗೂ ಇಬ್ಬರು ಎಲ್ ಡಿ ಎಫ್ ಸದಸ್ಯರುಗಳು ಮತವನ್ನು ಚಲಾಯಿಸದೆ ಮೌನವನ್ನು ಪಾಲಿಸಿದ್ದಾರೆ.ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬ ಗಾದೆ ಮಾತಿನಂತೆ ಕೆಲವೊಂದು ರಾಜಕೀಯ ಪಕ್ಷಗಳು ನಡೆಸಿದ ನಾಟಕೀಯ ವಿದ್ಯಾಮಾನದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಅಧ್ಯಕ್ಷ ಪದವಿ ಲಭಿಸಿದೆ.
ಬುಧವಾರ ಅಪರಾಹ್ನ ಬಳಿಕ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ರಫೀಕ್ 11 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಬಿಜೆಪಿ ಯ ಯಾದವ್ ಬಡಾಜೆ ಕೇವಲ 6 ಮತಗಳಲ್ಲಿ ಮಾತ್ರ ತೃಪ್ತಿ ಪಡಬೇಕಾಗಿ ಬಂದಿದೆ. ಇಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾದ ಜೀನ್ ಲವಿನಾ ಮೊಂತೇರೋ ಸೇರಿದಂತೆ ಇತರ ಮೂವರು ಇಲ್ಲಿ ಕೂಡಾ ಮತವನ್ನು ಯಾರಿಗೂ ಚಲಾಯಿಸದೆ ಮೌನವನ್ನು ಪಾಲಿಸಿದ್ದಾರೆ. ಅಧ್ಯಕ್ಷರನ್ನು ಬೆಂಬಲಿಸಿದ ಬಿಜೆಪಿಗೆ ಮತ ಚಲಾಯಿಸದೆ ತಟಸ್ಥರಾದ ನೂತನ ಅಧ್ಯಕ್ಷೆ ಜೀನ್ ಲವಿನಾ ಮೊಂತೇರೋ ರವರ ನಡೆ ಕೂಡಾ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕನ್ನಡಿಗರಿಗೇ ಒಲಿದ ಗಡಿ ಗ್ರಾ.ಪಂ.:
ಮಂಜೇಶ್ವರ ಗ್ರಾ.ಪಂ. ದಕ್ಷಿಣ ಕನ್ನಡದೊಂದಿಗೆ ತಾಗಿಕೊಂಡಿರುವ ಪಂಚಾಯತಿ ಆಗಿದ್ದು ಕೆಲವು ವರ್ಷಗಳ ಬಳಿಕ ಕನ್ನಡಿಗರೊಬ್ಬರಿಗೆ ಅಧ್ಯಕ್ಷ ಸ್ಥಾನ ದೊರಕಿದೆ. ಜೊತೆಗೆ ಸ್ವತಃ ಕಲಾವಿದೆಯೂ ಆಗಿರುವ ಮೊಂತೇರೊ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಗಿಳಿವಿಂಡು ಸನಿಹ ತಮ್ಮದೇ ಆದ ಕಲಾಕೇಂದ್ರವೊಂದನ್ನು ಹಲವು ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಕಲಾವಿದರ ಒಕ್ಕೂಟವಾದ ಸವಾಕ್ ನ ಮಂಜೇಶ್ವರ ವಲಯ ಅಧ್ಯಕ್ಷೆಯೂ ಆಗಿದ್ದಾರೆ.