ಕಾಸರಗೋಡು: ಜಲಸುರಕ್ಷತೆಯೊಂದಿಗೆ ಆಹಾರ ಸುರಕ್ಷತೆ, ಸಾಮಾಜಿಕ-ಆರ್ಥಿಕ ಸುರಕ್ಷತೆ ತಳಹದಿಯಾಗಿಸಿಕೊಂಡು ಹರಿತ ಕೇರಳಂ ಮಿಷನ್ ನ ಚಟುವಟಿಕೆಗಳು ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳ್ಳುತ್ತಿವೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಹರಿತ ಕೇರಳಂ ಮಿಷನ್ ನ 4ನೇ ವಾರ್ಷಿಕೋತ್ಸವ ಆಚರಣೆ ಅಂಗವಾಗಿ ಸಂಘಟನೆ ಜಿಲ್ಲೆಯಲ್ಲಿ ಜಾರಿಗೊಳಿಸಿದ ವಿವಿಧ ಚಟುವಟಿಕೆಗಳ ಮತ್ತು ಪರ್ಯಾಯ ಉತ್ಪನ್ನಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮಾದರಿ ರೂಪದ ಚಟುವಟಿಕೆಗಳು ಹರಿತ ಕೇರಳಂ ಮಿಷನ್ ಕಳೆದ 4 ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಇದರ ಅಂಗವಾಗಿ ಜಲಸಂರಕ್ಷಣೆ ಖಚತಪಡಿಸಲು ತಡೆಗೋಡೆ ಮಹೋತ್ಸವವನ್ನು 2021ರಲ್ಲೂ ಮೊದಲ ಹಂತದಲ್ಲೇ ನಡೆಸಲಾಗುವುದು ಎಂದರು.
ಜಿಲ್ಲಾ ಶುಚಿತ್ವ ಮಿಷನ್ ಸಿದ್ಧಪಡಿಸಿರುವ ಆಯ್ದ ಸ್ಥಳೀಯಾಡಳಿತೆಗಳ "ಶುಚಿತ್ವ ಮೆರುಗು 2020-21" ಎಂಬ ಕೈಹೊತ್ತಗೆಯನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಅವರಿಗೆ ಹಸ್ತಾಂತರಿಸಿದರು. ಸಹಾಯಕ ಸಂಚಾಲಕರಾದ ಎ.ಲಕ್ಷ್ಮಿ, ಕೆ.ವಿ.ಪ್ರೇಮರಾಜನ್, ಎ.ಡಿ.ಸಿ.ಜನರಲ್ ಬೆವಿನ್ ಜಾನ್ ವರ್ಗೀಸ್, ಹಣಕಾಸು ಅಧಿಕಾರಿ ಕೆ.ಸತೀಶನ್, ಪಿ.ಎ.ಯು. ಯೋಜನೆ ನಿರ್ದೇಶಕ ಕೆ.ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.