ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆ ಮತ್ತೊಮ್ಮೆ ವಿಫಲವಾಗಿದ್ದು ಬಿಕ್ಕಟ್ಟು ಮುಂದುವರೆದಿದೆ.
ದೆಹಲಿಯ ಸಿಂಗು ಗಡಿಯಲ್ಲಿ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು ಇಲ್ಲಿಯವರೆಗೂ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ 6 ಸುತ್ತಿನ ಮಾತುಕತೆ ಸಹ ವಿಫಲವಾಗಿದ್ದು ಜನವರಿ 4ಕ್ಕೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ.
ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸುವುದಾಗಿ ಹೇಳಿತು. ಆದರೆ ರೈತರ ಪ್ರತಿನಿಧಿಗಳು ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮುಖ್ಯ ಬೇಡಿಕೆಗೆ ಅಂಟಿಕೊಂಡಿದ್ದರು. ಹೀಗಾಗಿ ಸುದೀರ್ಘವಾಗಿ ನಡೆದ ಮಾತುಕತೆ ವಿಫಲವಾಗಿದೆ.
ಇಂದು ಮೂವರು ಕೇಂದ್ರ ಸಚಿವರು ಮತ್ತು ರೈತರ 41 ಸದಸ್ಯರ ಪ್ರತಿನಿಧಿ ಗುಂಪು ನಡುವೆ ಮಾತುಕತೆ ನಡೆಯಿತು. ಇಂದಿನ ಸಭೆ ನಿರ್ಣಾಯಕವಾಗಲಿದೆ ಎಂದು ಸರ್ಕಾರ ಆಶಿಸಿತು. ಮಾತುಕತೆ ಸಫಲವಾಗಿದ್ದರೆ ಪ್ರತಿಭಟನಾ ನಿರತ ರೈತರು ಹೊಸ ವರ್ಷವನ್ನು ಆಚರಿಸಲು ದೆಹಲಿ ಗಡಿಯಿಂದ ಆಯಾ ಮನೆಗಳಿಗೆ ಮರಳುತ್ತಾರೆಂದು ಭಾವಿಸಲಾಗಿತ್ತು. ಆದರೆ ರೈತ ಮುಖಂಡರು ತಮ್ಮ ಬೇಡಿಕೆಗಳಿಗೆ ಸರ್ಕಾರ ಒಪ್ಪುವವರೆಗೂ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ) ಕಾನೂನಾತ್ಮಕಗೊಳಿಸಲು ಸರ್ಕಾರ ಒಪ್ಪುತ್ತಿಲ್ಲ. ಆದರೆ ಎಂಎಸ್ಪಿಯನ್ನು ಸರಿಯಾಗಿ ಅನುಷ್ಠಾನಗೊಳಿಸುವ ಆಯ್ಕೆಗಳ ಬಗ್ಗೆ ಸಮಿತಿಯನ್ನು ರಚಿಸಲು ಮುಂದಾಗಿದೆ ಎಂದು ಪಂಜಾಬ್ ಕಿಸಾನ್ ಯೂನಿಯನ್ ರಾಜ್ಯ ಅಧ್ಯಕ್ಷ ರುಲ್ದು ಸಿಂಗ್ ಮಾನ್ಸಾ ಹೇಳಿದ್ದಾರೆ, ಆದರೆ ಈ ಪ್ರಸ್ತಾಪವು ಒಕ್ಕೂಟಗಳು ತಿರಸ್ಕರಿಸಿದೆ ಎಂದರು.
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಹಿಂಪಡೆಯಲು ಮತ್ತು ಕೃಷಿ ತ್ಯಾಜ್ಯ ಸುಡುವ ಪ್ರಕರಣಗಳಲ್ಲಿ ರೈತರಿಗೆ ವಿಧಿಸಲಾಗುವ ದಂಡದ ನಿಬಂಧನೆಯನ್ನು ತೆಗೆದುಹಾಕುವ ಸುಗ್ರೀವಾಜ್ಞೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.