ಮೈಸೂರು: ಅರಮನೆ ನಗರಿ ಮೈಸೂರು ಮತ್ತು ಬಂದರು ನಗರಿ ಮಂಗಳೂರು ನಡುವೆ ಬಹುನಿರೀಕ್ಷಿತ ವಿಮಾನ ಸೇವೆಗೆ ಶುಕ್ರವಾರ ಇಲ್ಲಿ ಚಾಲನೆ ನೀಡಲಾಯಿತು.
ಇದು ಏರ್ ಇಂಡಿಯಾದ ಅಂಗಸಂಸ್ಥೆ ಅಲೈಯನ್ಸ್ ಏರ್‌ನ ವಿಮಾನವಾಗಿದ್ದು, ಹೊಸ ಸೇವೆಯಿಂದ ಹೂಡಿಕೆ ಉತ್ತೇಜಿಸುವುದಲ್ಲದೆ, ಎರಡೂ ಪ್ರದೇಶಗಳ ಪ್ರವಾಸೋದ್ಯಮವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಅಲೈಯನ್ಸ್ ಏರ್ ವಿಮಾನ ಎಐ- 9532 ವಾ ಬುಧವಾರ, ಶುಕ್ರವಾರ ಶನಿವಾರ ಮತ್ತು ಭಾನುವಾರ ಗಳಂದು ವಾರದಲ್ಲಿ ನಾಲ್ಕು ಬಾರಿ ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 11.20ಕ್ಕೆ ಮೈಸೂರಿನಿಂದ ಹೊರಟು ಮಧ್ಯಾಹ್ನ 12.30ಕ್ಕೆ ಮಂಗಳೂರು ತಲುಪಲಿದೆ.
ವಾಪಸ್ ಮಾರ್ಗದಲ್ಲಿ ಅಲೈಯನ್ಸ್ ಏರ್ ವಿಮಾನ ಎಐ- 9533 ಮಂಗಳೂರಿನಿಂದ ಮಧ್ಯಾಹ್ನ 12.55 ಕ್ಕೆ ಹೊರಟು ಮಧ್ಯಾಹ್ನ 1.55 ಕ್ಕೆ ಮೈಸೂರಿಗೆ ಆಗಮಿಸಲಿದೆ. ಎರಡೂ ಪ್ರದೇಶಗಳಲ್ಲಿನ ವ್ಯಾಪಾರ ಆಸಕ್ತಿಯ ಉದ್ಯಮಿಗಳಿಗೆ ಈ ಸೇವೆಯಿಂದ ಹೆಚ್ಚು ಅನುಕೂಲವಾಗುವ ನಿರೀಕ್ಷೆ ಇದೆ.
ಅಲ್ಲದೆ, ಎರಡೂ ನಗರಗಳ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗಲಿದೆ. ಹೊಸ ವಿಮಾನ ಸೇವೆಯನ್ನು ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದ ಭಾಗೀದಾರರು ಮತ್ತು ವಿವಿಧ ವಾಣಿಜ್ಯ ಸಂಸ್ಥೆಗಳು ಸ್ವಾಗತಿಸಿವೆ.
ರಸ್ತೆಯ ಮೂಲಕ ಎರಡೂ ನಗರಗಳ ನಡುವಿನ ಪ್ರಯಾಣ ತುಂಬಾ ಪ್ರಯಾಸವೆಂದೇ ಹೇಳಬಹುದು. ಏಕೆಂದರೆ, ರಸ್ತೆ ಮೂಲಕ ಸಾಗಲು 8 ಗಂಟೆ ತೆಗೆದುಕೊಳ್ಳುತ್ತದೆ. ಬೆಟ್ಟ ಪ್ರದೇಶವಾದ ಕೊಡಗಿನ ಮೂಲಕ ಹಾದು ಹೋಗುವ ಈ ಮಾರ್ಗ, ಮಳೆಗಾಲದಲ್ಲಿ ಭೂಕುಸಿತಗಳಿಂದ ಸ್ಥಗಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ವಿಮಾನ ಸೇವೆ ತುಂಬಾ ಅನುಕೂಲಕರವೆಂದು ಭಾವಿಸಲಾಗಿದೆ.