ತಿರುವನಂತಪುರ: 51 ವರ್ಷದ ಪತ್ನಿಯ 'ಅನುಮಾನಾಸ್ಪದ' ಸಾವಿನ ನಂತರ ಕೇರಳ ಪೋಲೀಸರು 26 ವರ್ಷದ ಆಕೆಯ ಪತಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೃತ ಮಹಿಳೆಯನ್ನು ಕಾರಕೋಣಂನ ತ್ರೆಸ್ಯಾಪುರಂನ ಸಖಾ ಕುಮಾರಿ ಎಂದು ಗುರುತಿಸಲಾಗಿದ್ದು, ಮಹಿಳೆಯನ್ನು ಶನಿವಾರ ಬೆಳಗ್ಗೆ ಹತ್ತಿರದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕ್ರಿಸ್‍ಮಸ್ ಅಲಂಕಾರದ ವೇಳೆ ಪತ್ನಿಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಪತಿ ಅರುಣ್ ವೈದ್ಯರಿಗೆ ತಿಳಿಸಿದ್ದಾರೆ. ಆದರೆ ವೈದ್ಯರು ಮಹಿಳೆಯ ದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದಾಗ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕೂಡಲೇ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೋಲೀಸರು ಅರುಣ್‍ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಸಖಾ ಹಾಗೂ ಅರುಣ್ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎಂದು ಸಖಾ ಕುಮಾರಿ ಅವರ ಸಂಬಂಧಿಕರು ತಿಳಿಸಿರುವುದಾಗಿ ಪೋಲೀಸರು ಹೇಳಿದ್ದಾರೆ.
ವಿಧಿವಿಜ್ಞಾನ ತಂಡ ಅರುಣ್ ಅವರ ಮನೆಯಲ್ಲಿ ವಿದ್ಯುತ್ ಅಲಂಕಾರವನ್ನು ಪರೀಸಿಲಿಸಿದೆ. ಸಾವಿಗೆ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ವರದಿಗಾಗಿ ಕಾಯುತ್ತಿರುವುದಾಗಿ ಪೋಲೀಸರು ತಿಳಿಸಿದ್ದಾರೆ.