ತಿರುವನಂತಪುರ: ಕೊಚ್ಚಿ ಮತ್ತು ಮಂಗಳೂರು ನಡುವೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ (ಗೇಲ್) ನಿರ್ಮಿಸಿರುವ ಅನಿಲ ಕೊಳವೆಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 5ರಂದು ಆನ್‌ಲೈನ್ ಮೂಲಕ ಉದ್ಘಾಟಿಸುವರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ತಿಳಿಸಿದರು.
'ಈ ಅನಿಲ ಕೊಳವೆ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ಒಪ್ಪಿಗೆ ಸೂಚಿಸಿರುವ ವಿಷಯವನ್ನು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಬುಧವಾರವಷ್ಟೆ ಖಚಿತಪಡಿಸಿದರು' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
444 ಕಿ.ಮೀ. ಉದ್ದದ ಈ ಮಾರ್ಗವನ್ನು ಅಳವಡಿಸುವ ಕಾರ್ಯ 2009ರಲ್ಲಿ ಆರಂಭಗೊಂಡಿತು. ₹ 2,915 ಕೋಟಿ ವೆಚ್ಚದ ಈ ಯೋಜನೆ 2014ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಸುರಕ್ಷತಾ ಕ್ರಮಗಳು, ಸ್ವಾಧೀನಪಡಿಸಿಕೊಂಡ ಭೂಮಿ ಬೆಲೆಯಲ್ಲಿ ಹೆಚ್ಚಳದಂತಹ ಅಡ್ಡಿಗಳಿಂದಾಗಿ ಯೋಜನೆ ಪೂರ್ಣಗೊಳ್ಳುವುದು ವಿಳಂಬವಾಯಿತು.
ಪರಿಷ್ಕೃತ ಯೋಜನೆ ವೆಚ್ಚ ₹ 5,750ಕ್ಕೇರಿದೆ ಎಂದು ಮೂಲಗಳು ಹೇಳಿವೆ.