ನವದೆಹಲಿ: ಭಾರತದ ದೈನಂದಿನ ಹೊಸ ಕೋವಿಡ್-19 ಸಾವಿನ ಸಂಖ್ಯೆ ಆರು ತಿಂಗಳ ನಂತರ 300 ಕ್ಕಿಂತ ಕಡಿಮೆ ವರದಿಯಾಗಿದೆ. ಕೊರೊನಾ ಸಾಂಕ್ರಾಮಿಕವು ತೀವ್ರ ಮಟ್ಟಕ್ಕೆ ಏರಿದ ಬಳಿಕ ಸಾವಿನ ಪ್ರಮಾಣವು ಕೂಡ ಏರಿಕೆಯಾಗಿತ್ತು. ಆದರೆ ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖದ ಜೊತೆಗೆ ಸಾವಿನ ಪ್ರಮಾಣದಲ್ಲೂ ಕಡಿಮೆ ವರದಿಯಾಗಿದೆ.
ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 1,47,343 ಕ್ಕೆ ತಲುಪಿದ್ದು, ಸೋಂಕಿನ ಪ್ರಮಾಣ 1,01,69,118 ಕ್ಕೆ ಏರಿದೆ ಎಂದು ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 251 ಸಾವುಗಳು ಮತ್ತು 22,273 ಹೊಸ ಸೋಂಕುಗಳು ವರದಿಯಾಗಿವೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 97,40,108 ಕ್ಕೆ ಏರಿದ್ದು, ರಾಷ್ಟ್ರೀಯ ಚೇತರಿಕೆ ಪ್ರಮಾಣವನ್ನು ಶೇಕಡಾ 95.78 ಕ್ಕೆ ಏರಿಕೆಯಾಗಿದ್ದು, ಕೋವಿಡ್ -19 ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.45 ರಷ್ಟಿದೆ.
ಸಕ್ರಿಯ ಪ್ರಕರಣಗಳು ಸತತ ಐದನೇ ದಿನ ಮೂರು ಲಕ್ಷಕ್ಕಿಂತ ಕಡಿಮೆಯಾಗಿದೆ. ದೇಶದಲ್ಲಿ 2,81,667 ಸಕ್ರಿಯ ಕೊರೊನಾವೈರಸ್ ಸೋಂಕುಗಳಿದ್ದು, ಒಟ್ಟು ಪ್ರಕರಣಗಳು ಶೇಕಡಾ 2.77 ರಷ್ಟಿದೆ ಎಂದು ಅಂಕಿ-ಅಂಶಗಳು ತಿಳಿಸಿದೆ.
ಏತನ್ಮಧ್ಯೆ, ಬ್ರಿಟನ್‌ನಲ್ಲಿ ಪತ್ತೆಯಾಗಿದ್ದ ಹೊಸ ಕೊರೊನಾವೈರಸ್ ಸೋಂಕಿನ ಮೊದಲ ಪ್ರಕರಣವನ್ನು ಫ್ರಾನ್ಸ್ ವರದಿ ಮಾಡಿದೆ. ಹೆಚ್ಚು ವೇಗವಾಗಿ ಸೋಂಕು ಹರಡಿಸುವ ಸಾಮರ್ಥ್ಯವಿರುವ ವೈರಸ್ ಬ್ರಿಟನ್‌ನಲ್ಲಿ ಹೆಚ್ಚು ಹರಡಿರುವ ಪರಿಣಾಮ 50ಕ್ಕೂ ಹೆಚ್ಚು ದೇಶಗಳು ಬ್ರಿಟನ್‌ಗೆ ತಾತ್ಕಾಲಿಕವಾಗಿ ವಿಮಾನ ಹಾರಾಟ ನಿಷೇಧಿಸಿದೆ.