ಲಕ್ನೋ: ಕೊರೋನ ಸಾಂಕ್ರಾಮಿಕ ರೋಗದ ಕಾರಣ ದೀರ್ಘಕಾಲ ವಿಶ್ವವಿದ್ಯಾನಿಲಯಗಳು ಮುಚ್ಚಿದ್ದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ (ಯುಜಿಸಿ) ಎಂಫಿಲ್ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳ ಪ್ರೌಢ ಪ್ರಬಂಧ ಸಲ್ಲಿಕೆಯ ಕಾಲಾವಕಾಶವನ್ನು 6 ತಿಂಗಳು ವಿಸ್ತರಿಸಿದೆ. ಈ ಹಿಂದೆ ಯುಜಿಸಿ ವಿದ್ಯಾರ್ಥಿಗಳು ಪ್ರೌಢ ಪ್ರಬಂಧ ಸಲ್ಲಿಸುವ ಕಾಲಾವಕಾಶವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿತ್ತು.
ಈಗ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಆದರೆ, ಎಂಫಿಲ್ ಹಾಗೂ ಪಿಎಚ್‌ಡಿಯ ಶಿಷ್ಯವೇತನದ ಕಾಲಾವಧಿ 5 ವರ್ಷ. ''ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯ ಕಳೆದ ಹಲವು ತಿಂಗಳು ಬಾಗಿಲು ಮುಚ್ಚಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದ ಪ್ರಯೋಗಾಲಯದಲ್ಲಿ ಸಂಶೋಧನೆ, ಪ್ರಯೋಗ ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೆ ಗ್ರಂಥಾಲಯದ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಪ್ರೌಢ ಪ್ರಬಂಧವನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ'' ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಹೇಳಿದ್ದಾರೆ. ''ಈ ಮೇಲಿನ ವಿಚಾರ ಹಾಗೂ ಸಂಶೋಧಕರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಪ್ರೌಢ ಪ್ರಬಂಧವನ್ನು ಸಲ್ಲಿಸಬೇಕಾದ ಎಂಫಿಲ್ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಜೂನ್ 30ರ ವರೆಗೆ ಸಲ್ಲಿಸಲು ವಿಶ್ವವಿದ್ಯಾನಿಲಯ ಅವಕಾಶ ನೀಡಿದೆ'' ಎಂದು ಅವರು ತಿಳಿಸಿದ್ದಾರೆ.