ನವದೆಹಲಿ: 6-8 ತಿಂಗಳ ಅವಧಿಯಲ್ಲಿ 60 ಕೋಟಿ ಭಾರತೀಯರಿಗೆ ಕೋವಿಡ್-19 ಲಸಿಕೆ ತಲುಪಿಸುವುದಕ್ಕೆ ಭಾರತ ಸರ್ಕಾರ ಸಿದ್ಧತೆ ನಡಿಸಿದ್ದು, ಇದಕ್ಕಾಗಿ ಚುನಾವಣಾ ಮಾನವಶಕ್ತಿ, ಸಂಪನ್ಮೂಲಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.
ಈಗಾಗಲೇ ನಾಲ್ಕು ಸಂಸ್ಥೆಗಳಿಂದ ಸೂಕ್ತ ಲಸಿಕೆಗಳು ಅಂತಿಮ ಹಂತದ ತಯಾರಿಯಲ್ಲಿದ್ದು, ಭಾರತದಲ್ಲಿ ಅನುಮೋದನೆ ಪಡೆಯುವ ರೇಸ್ ನಲ್ಲಿವೆ. ಕೋವಿಡ್-19 ಗೆ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಪ್ರಧಾನಿಗಳಿಗೆ ಸಲಹೆ ನೀಡುವ ತಜ್ಞರ ತಂಡದಲ್ಲಿರುವ ವಿಕೆ ಪೌಲ್ ಈ ಬಗ್ಗೆ ಮಾತನಾಡಿದ್ದು, ಸಾಂಪ್ರದಾಯಿಕ ಕೋಲ್ಡ್ ಚೈನ್ ವ್ಯವಸ್ಥೆಯ ಮೂಲಕ ಜನರಿಗೆ ತಲುಪಿಸುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಸರ್ಕಾರ 2-8 ಡಿಗ್ರಿ ಸೆಲ್ಸಿಯಸ್ (36-48 ಡಿಗ್ರಿ ಫ್ಯಾರನ್ ಹೀಟ್) ಕೋಲ್ಡ್ ಸ್ಟೋರೇಜ್ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು ಲಸಿಕೆಗೆ ಬೇಕಾಗಿರುವ ಎಲ್ಲಾ ಅಗತ್ಯತೆಗಳನ್ನೂ ಪೂರೈಕೆ ಮಾಡಲು ಸಿದ್ಧತೆ ನಡೆಸಿಕೊಳ್ಳಲಾಗಿದೆ ಎಂದು ಪೌಲ್ ತಿಳಿಸಿದ್ದಾರೆ.ಸೆರಮ್, ಭಾರತ್, ಝೈಡಸ್ ಹಾಗೂ ಸ್ಪುಟ್ನಿಕ್ ಗೆ ಸಾಮಾನ್ಯವಾದ ಕೋಲ್ಡ್ ಚೈನ್ ಅಗತ್ಯವಿದೆ. ಈ ನಾಲ್ಕೂ ಲಸಿಕೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ನಮಗೆ ಕಾಣಿಸುತ್ತಿಲ್ಲ ಎಂದು ರಾಯ್ಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಪೌಲ್ ತಿಳಿಸಿದ್ದಾರೆ.
ವಿಶ್ವದ ಅತಿ ದೊಡ್ಡ ಲಸಿಕೆ ತಯಾರಿಕಾ ಸಂಸ್ಥೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಸ್ಟ್ರಾಝೆನಿಕಾದ ಕೋವಿಶೀಲ್ಡ್ ಲಸಿಕೆಯನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸುತ್ತಿದ್ದು, ಭಾರತದ ಬಯೋಟೆಕ್ನಾಲಜಿಯ ಭಾರತ್ ಬಯೋಟೆಕ್, ಝೈಡಸ್ ಕ್ಯಾಡಿಲಾ ತನ್ನದೇ ಆದ ಲಸಿಕೆಗಳನ್ನು ಉತ್ಪಾದಿಸುತ್ತಿವೆ.
ರಷ್ಯಾದ ಸ್ಪುಟ್ನಿಕ್ ಲಸಿಕೆಯನ್ನು ಉತ್ಪಾದಿಸಲು ಭಾರತದ ಔಷಧ ತಯಾರಕಾ ಸಂಸ್ಥೆ ಹೆಟೆರೊ ಒಪ್ಪಂದಕ್ಕೆ ಸಹಿ ಹಾಕಿತ್ತು.