ತಿರುವನಂತಪುರ: ಮುಂದಿನ ತಿಂಗಳೊಳಗೆ ರಾಜ್ಯಾದ್ಯಂತ ಶೇ.60 ವಿದ್ಯಾರ್ಥಿಗಳನ್ನು ಒಳಪಡಿಸಿ ರಾಜ್ಯದಲ್ಲಿ 10 ಮತ್ತು 12 ನೇ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಯೋಜಿಸುತ್ತಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಡಿ.17 ರಂದು ಕರೆಯುವ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ತರಗತಿಗಳ ಪ್ರಾರಂಭದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದರೆ ಹತ್ತನೇ ತರಗತಿ ಮತ್ತು ಹನ್ನೆರಡನೇ ತರಗತಿಗಳಲ್ಲಿನ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯದ ಶಿಕ್ಷಣ ಸಂಸ್ಥೆಗಳನ್ನು ಕಳೆದ 10 ತಿಂಗಳುಗಳಿಂದ ಮುಚ್ಚಲಾಗಿದೆ.
ಶಾಲೆಗಳು ಯಾವಾಗ ತೆರೆಯುತ್ತವೆ ಮತ್ತು ಯಾವ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾಗುತ್ತದೆ ಎಂಬಂತಹ ಅನೇಕ ಪ್ರಶ್ನೆಗಳು ಕಳೆದ ಎರಡು ತಿಂಗಳುಗಳಲ್ಲಿ ಕೇಳಿಬರುತ್ತಿವೆ. ವರದಿಗಳ ಪ್ರಕಾರ, ಕೆಳ ತರಗತಿಯ ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆಗೆ ಹಾಜರಾಗದಿರಬಹುದು. ಆದರೆ ಈವರೆಗೆ ಈ ಬಗ್ಗೆ ಯಾವುದೇ ಅಧಿಕೃತ ತೀರ್ಮಾನ ಕೈಗೊಳ್ಳಲಾಗಿಲ್ಲ.
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹತ್ತರ ಸಭೆ ಡಿಸೆಂಬರ್ 17 ರಂದು ತಿರುವನಂತಪುರದಲ್ಲಿ ನಡೆಯಲಿದೆ. ಸಾರ್ವತ್ರಿಕ ಪರೀಕ್ಷೆಗಳೊಂದಿಗೆ 10 ಮತ್ತು 12 ನೇ ತರಗತಿಗಳನ್ನು ಜನವರಿಯಲ್ಲಿ ಆರಂಭಿಸಲಾಗುವುದೇ ಎಂದು ಸಭೆಯಲ್ಲಿ ಚರ್ಚಿಸಲಾಗುವುದು. ಕೋವಿಡ್ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು. 10 ಮತ್ತು 12 ನೇ ತರಗತಿಯ ಶಿಕ್ಷಕರು ಡಿಸೆಂಬರ್ 17 ರಿಂದ ಶಾಲೆಗೆ ಬರಲು ತಿಳಿಸಲಾಗಿದೆ. ಐವತ್ತು ಪ್ರತಿಶತ ಶಿಕ್ಷಕರನ್ನು ಪರ್ಯಾಯ ದಿನಗಳಲ್ಲಿ ಬರಲು ಸೂಚಿಸಲಾಗಿದೆ.