ನವದೆಹಲಿ: ನವೆಂಬರ್‌ನಲ್ಲಿ ಒಟ್ಟು 63.54 ಲಕ್ಷ ಪ್ರಯಾಣಿಕರು ದೇಶದೊಳಗೆ ವಿಮಾನಗಳಲ್ಲಿ ಪ್ರಯಾಣಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 51 ರಷ್ಟು ಕಡಿಮೆಯಾಗಿದೆ ಎಂದು ದೇಶದ ವಿಮಾನಯಾನ ನಿಯಂತ್ರಕ ಡಿಜಿಸಿಎ ಶುಕ್ರವಾರ ತಿಳಿಸಿದ್ದಾರೆ.
ಡಿಜಿಸಿಎ ಪ್ರಕಾರ, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕ್ರಮವಾಗಿ 39.43 ಲಕ್ಷ ಮತ್ತು 52.71 ಲಕ್ಷ ಜನರು ಪ್ರಾದೇಶಿಕ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.
ಈ ಪೈಕಿ ನವೆಂಬರ್‌ನಲ್ಲಿ ಇಂಡಿಗೊದಲ್ಲಿ 34.23 ಲಕ್ಷ ಜನರು ಪ್ರಯಾಣಿಸಿದ್ದು, ಇದು ಒಟ್ಟು ದೇಶೀಯ ಮಾರುಕಟ್ಟೆಯ ಶೇ 53.9ರಷ್ಟಾಗಿದೆ. ಸ್ಪೈಸ್ ಜೆಟ್ 8.4 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ದಿದ್ದು, ಇದು ಶೇ 13.2ರಷ್ಟು ಪಾಲನ್ನು ಹೊಂದಿರುವುದಾಗಿ ಡಿಜಿಸಿಎ ಮಾಹಿತಿ ಹಂಚಿಕೊಂಡಿದೆ.
ನವೆಂಬರ್‌ನಲ್ಲಿ ಏರ್ ಇಂಡಿಯಾ, ಗೋಏರ್, ಏರ್ ಏಶಿಯಾ ಇಂಡಿಯಾ ಮತ್ತು ವಿಸ್ತಾರಾ ಕ್ರಮವಾಗಿ 6.56 ಲಕ್ಷ, 5.77 ಲಕ್ಷ, 4.21 ಲಕ್ಷ ಮತ್ತು 3.97 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ದಿವೆ. ಆರು ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳ ಸೀಟು ಭರ್ತಿ ಪ್ರಮಾಣ ನವೆಂಬರ್‌ನಲ್ಲಿ ಶೇ 66.3 ರಿಂದ 77.7 ರಷ್ಟಿತ್ತು ಎಂದು ಅದು ಹೇಳಿದೆ.
'ಲಾಕ್ ಡೌನ್ ತೆರವು ಮತ್ತು ಹಬ್ಬದ ಋತುವಿನ ನಂತರ ಹೆಚ್ಚಿದ ಬೇಡಿಕೆಯಿಂದಾಗಿ ನವೆಂಬರ್ 2020ರ ಪ್ರಯಾಣಿಕರ ಪ್ರಯಾಣ ದರವು ಸ್ವಲ್ಪ ಚೇತರಿಕೆ ಕಂಡಿದೆ' ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ನವೆಂಬರ್‌ನಲ್ಲಿ ಸ್ಪೈಸ್‌ಜೆಟ್‌ನಲ್ಲಿ ಆಕ್ಯುಪೆನ್ಸಿ (ಸೀಟು ಭರ್ತಿ) ದರವು ಶೇ 77.7 ರಷ್ಟಿತ್ತು ಎಂದು ನಿಯಂತ್ರಕ ಗಮನಿಸಿದೆ. ಈಮಧ್ಯೆ, ಇತರ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ವಿಸ್ತಾರಾ, ಗೋಏರ್, ಏರ್ ಇಂಡಿಯಾ ಮತ್ತು ಏರ್ ಏಷ್ಯಾ ಇಂಡಿಯಾಗಳ ಆಕ್ಯುಪೆನ್ಸೀ ದರ ಕ್ರಮವಾಗಿ ಶೇ 74, 70.8, 70.8, 69.6 ಮತ್ತು 66.3ರಷ್ಟಿದೆ ಎಂದು ಡಿಜಿಜಿಸಿಎ ತಿಳಿಸಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಎರಡು ತಿಂಗಳ ನಂತರ ಭಾರತದಲ್ಲಿ ಮೇ 25 ರಂದು ದೇಶೀಯ ವಿಮಾನ ಪ್ರಯಾಣಿಕರ ಹಾರಾಟವನ್ನು ಪುನರಾರಂಭಿಸಿತು. ಭಾರತೀಯ ವಿಮಾನಯಾನ ಸಂಸ್ಥೆಗಳು ಕೋವಿಡ್-19 ಪೂರ್ವದಲ್ಲಿ ತಮ್ಮ ಗರಿಷ್ಠ ಶೇ 80 ರಷ್ಟು ದೇಶೀಯ ವಿಮಾನಗಳನ್ನು ಚಲಾಯಿಸಲು ಅನುಮತಿ ನೀಡಲಾಗಿದೆ.