ಕೊಚ್ಚಿ: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಕೇರಳದ ಕೋಯಿಕ್ಕೋಡ್ ಮತ್ತೊಂದು ಸೋಂಕು ಕಾಣಿಸಿಕೊಂಡಿದೆ. ಶಿಗೆಲ್ಲಾ ಸೋಂಕಿನ ಕನಿಷ್ಠ ಆರು ಪ್ರಕರಣಗಳು ಖಚಿತವಾಗಿದ್ದು, ಇನ್ನು 20 ಶಂಕಿತ ಪ್ರಕರಣಗಳು ವರದಿಯಾಗಿವೆ. ಇವರಲ್ಲಿ ಮಕ್ಕಳೇ ಹೆಚ್ಚಿದ್ದಾರೆ. ಶಿಗೆಲ್ಲಾ ಬ್ಯಾಕ್ಟೀರಿಯಾದ ಶಂಕಿತ ಸೋಂಕಿಗೆ ಒಳಗಾದ 11 ವರ್ಷದ ಮಗು ಕಳೆದ ವಾರ ಮೃತಪಟ್ಟಿದೆ.
ಶಿಗೆಲ್ಲಾ ಎಂಬ ಬ್ಯಾಕ್ಟೀರಿಯಾ ಕುಟುಂಬದಿಂದ ಈ ಶಿಗೆಲ್ಲಾ ಸೋಂಕು ಹರಡುತ್ತಿದ್ದು, ಅತಿಸಾರ, ಜ್ವರ ಮತ್ತು ಹೊಟ್ಟೆನೋವು ಇದರ ಸಾಮಾನ್ಯ ಲಕ್ಷಣಗಳಾಗಿವೆ. ಕೆಲವರಿಗೆ ಈ ಎಲ್ಲ ಲಕ್ಷಣಗಳು ಕಾಣಿಸದೆಯೂ ಇರಬಹುದು. ಮೂರು ದಿನಕ್ಕಿಂತ ಹೆಚ್ಚು ದಿನ ಅತಿಸಾರ ಮತ್ತು ಇತರೆ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಈ ಬ್ಯಾಕ್ಟೀರಿಯಾ ಸೋಂಕು ಕಲುಷಿತ ನೀರು ಮತ್ತು ಆಹಾರದಿಂದ ಹರಡುತ್ತದೆ.
ಕೋಯಿಕ್ಕೋಡ್‍ನಲ್ಲಿ ಶಿಗೆಲ್ಲಾ ಸೋಂಕು ತನ್ನ ಪಾಲಿಕೆಯ ವ್ಯಾಪ್ತಿಯ ಕೊಟ್ಟಪರಂಬು ವಾರ್ಡ್‍ನಲ್ಲಿ ಮಾತ್ರ ಕಾಣಿಸಿಕೊಂಡಿದೆ. ಹೀಗಾಗಿ ವಾರಾಂತ್ಯದಲ್ಲಿ ವೈದ್ಯಕೀಯ ಶಿಬಿರ ನಡೆಸಲು ಕೋಯಿಕ್ಕೋಡ್ ಪಾಲಿಕೆ ಆರೋಗ್ಯಾಧಿಕಾರಿಗಳು ಉದ್ದೇಶಿಸಿದ್ದಾರೆ.
ಆರು ರೋಗಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಪರೀಕ್ಷಿಸಿದ ವೈದ್ಯಕೀಯ ಕಾಲೇಜು ಆಸ್ಪತ್ರೆಯು ಶಿಗೆಲ್ಲಾ ಸೋಂಕು ಇರುವುದನ್ನು ಖಚಿತಪಡಿಸಿದ್ದಾರೆ. ಸಣ್ಣಪುಟ್ಟ ಲಕ್ಷಣಗಳು ಕಂಡುಬಂದಿರುವ ಇನ್ನು 20 ಮಂದಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಕೋಯಿಕ್ಕೋಡ್ ಜಿಲ್ಲಾ ವೈದ್ಯಾಧಿಕಾರಿ ಡಾ. ಜಯಶ್ರೀ ವಿ. ತಿಳಿಸಿದ್ದಾರೆ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಅತಿಸಾರಕ್ಕಿಂತ ಶಿಗೆಲ್ಲಾ ಸೋಂಕಿನ ಲಕ್ಷಣ ಹೆಚ್ಚು ಪ್ರಬಲವಾಗಿರುತ್ತದೆ. ಜೊತೆಗೆ ಅವರ ವೈದ್ಯಕೀಯ ಸ್ಥಿತಿ ವೇಗವಾಗಿ ಹದಗೆಡುತ್ತದೆ ಎಂದು ಅವರು ಹೇಳಿದ್ದಾರೆ.
ನಾಲ್ವರ ಹೊರತಾಗಿ ಶಂಕಿತ ಸೋಂಕಿತರೆಲ್ಲರೂ ಮಕ್ಕಳಾಗಿದ್ದಾರೆ. ಒಂದಿಬ್ಬರನ್ನು ಬಿಟ್ಟು ಉಳಿದವರೆಲ್ಲ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಕಳೆದ ವಾರ ಮೃತಪಟ್ಟಿದ್ದ ಒಂದು ಮಗುವಿಗೂ ಶಿಗೆಲ್ಲಾ ಸೋಂಕು ಇತ್ತು ಎಂದು ಶಂಕಿಸಲಾಗಿದೆ.