ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ನಾಯಕರು ಡಿಸೆಂಬರ್ 8 ರಂದು ಸಂಜೆ 7 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನ ವಕ್ತಾರ ರಾಕೇಶ್ ಟಿಕೈಟ್ "ಈಗ ನಾವು ಸಿಂಘು ಗಡಿಗೆ ತೆರಳುತ್ತಿದ್ದೇವೆ, ಅಲ್ಲಿಂದ ಮುಂದೆ ಗೃಹ ಸಚಿವರನ್ನು ಭೇಟಿ ಮಾಡಲಿದ್ದೇವೆ. ಐದನೇ ಸುತ್ತಿನ ಮಾತುಕತೆ ಅನಿರ್ದಿಷ್ಟವಾಗಿತ್ತಾದರೂ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ 9 ರಂದು ಮತ್ತೊಂದು ಸಭೆ ಕರೆದಿದ್ದಾರೆ. ರೈತ ಗುಂಪುಗಳ ಮುಖಂಡರು ಈವರೆಗೆ ಸರ್ಕಾರದೊಂದಿಗೆ ಹಲವಾರು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಹೊಸ ಕೃಷಿ ಕಾಯ್ದೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಕರೆ ನೀಡಲಾಗಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಭಾಗವಾಗಿ ರೈತರು ಇಂದು ರಾಷ್ಟ್ರೀಯ ಹೆದ್ದಾರಿಗಳೂ ಸೇರಿ ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದ್ದರು. ಪಂಜಾಬ್ ಮತ್ತು ಹರ್ಯಾಣದಲ್ಲಿ ಬಂದ್ ಗೆ ಅತಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಕ ಬೆಂಬಲ ದೊರೆತಿದ್ದು ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು.