ಲಂಡನ್: ಬ್ರಿಟನ್‌ನಲ್ಲಿ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದ್ದು, ಹಾಲಿ ಇರುವ ವೈರಸ್ ತಳಿಗಿಂತ ಇದು ಶೇ.70ರಷ್ಟು ಹರಡುವಿಕೆ ವೇಗವನ್ನು ಹೊಂದಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ನಲ್ಲಿ ಕೊರೋನಾ ವೈರಸ್ ನ ಹೊಸ ತಳಿ ಪತ್ತೆಯಾಗಿದೆ. ಇದು ವಿಜ್ಞಾನಿಗಳ ನಿರೀಕ್ಷೆಯನ್ನೂ ಮೀರಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಪರಿಸ್ಥಿತಿ ಕೈಮೀರಿದೆ ಎಂದು ಸ್ವತಃ ಬ್ರಿಟನ್ ಸರ್ಕಾರ ಹೇಳಿದೆ. ಇದರ ಬೆನ್ನಲ್ಲೇ ಬ್ರಿಟನ್‌ನಿಂದ ಬರುವ ಎಲ್ಲಾ ವಿಮಾನಗಳನ್ನು ಯೂರೋಪ್ ಹಲವು ರಾಷ್ಟ್ರಗಳು ರದ್ದುಪಡಿಸಿವೆ.
ಬ್ರಿಟನ್‌ನ ಕೆಲವು ಭಾಗದಲ್ಲಷ್ಟೇ ಹೊಸ ಕೊರೊನಾವೈರಸ್ ಪತ್ತೆಯಾಗಿದೆ. ಹೀಗಾಗಿ ಬ್ರಿಟನ್‌ನ ನಗರ ಪ್ರದೇಶಗಳಲ್ಲಿ ಕಠಿಣ ಲಾಕ್‌ಡೌನ್ ಹೇರಲಾಗಿದೆ. ಹಲವು ಪ್ರದೇಶಗಳಲ್ಲಿ ಭಾನುವಾರದಿಂದಲೇ ಲಾಕ್ ಡೌನ್ ಜಾರಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 26ರಿಂದ ಜಾರಿಯಾಗಲಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗಾಗಿ ಜನರು ಸೇರುವುದನ್ನು ನಿಷೇಧಿಸಲಾಗಿದೆ. ಈ ವಿಷಯವನ್ನು ಬ್ರಿಟನ್ ಸರ್ಕಾರ ಘೋಷಿಸಿದ ಬೆನ್ನಲ್ಲೇ ನೆರೆಯ ರಾಷ್ಟ್ರಗಳು, ಬ್ರಿಟನ್‌ಗೆ ವಿಮಾನ ಸಂಪರ್ಕವನ್ನು ರದ್ದುಪಡಿಸಿವೆ. ಬ್ರಿಟನ್‌ನಲ್ಲಿ ಪತ್ತೆಯಾದಂತಹ ವೈರಸ್‌ನ ಪ್ರಕರಣಗಳು ಡೆನ್ಮಾರ್ಕ್‌ನಲ್ಲಿ, ನೆದರ್‌ಲೆಂಡ್ಸ್‌ನಲ್ಲಿ ಪತ್ತೆಯಾಗಿವೆ.
ಯೂರೋಪ್‌ನ ಎಲ್ಲಾ ರಾಷ್ಟ್ರಗಳಿಗೆ ಈ ವೈರಸ್ ಹರಡಿರುವ ಅಪಾಯವಿದೆ. ಹೀಗಾಗಿಯೇ ಬ್ರಿಟನ್ ಜತೆಗೆ ವಿಮಾನ ಸಂಪರ್ಕವನ್ನು ಇತರೆ ರಾಷ್ಟ್ರಗಳು ರದ್ದುಪಡಿಸಿವೆ. ಬೆಲ್ಜಿಯಂ, ಆಸ್ಟ್ರಿಯಾ, ನೆದರ್‌ಲೆಂಡ್ಸ್, ಡೆನ್ಮಾರ್ಕ್, ಸ್ಪೇನ್ ಈಗಾಗಲೇ ಬ್ರಿಟನ್‌ನಿಂದ ವಿಮಾನ ಸಂಚಾರವನ್ನು ರದ್ದುಪಡಿಸಿವೆ. ಜರ್ಮನಿಯೂ ಈ ಕ್ರಮವನ್ನು ತೆಗೆದುಕೊಳ್ಳಲು ಚಿಂತನೆ ನಡೆಸುತ್ತಿದೆ.
ಹೊಸ ಸ್ವರೂಪದ ವೈರಸ್ ಹಾಲಿ ಇರುವ ವೈರಸ್ ಗಿಂತ ಶೇ.70ರಷ್ಟು ಹೆಚ್ಚು ಹರಡುವಿಕೆ ವೇಗ ಹೊಂದಿದೆ ಎಂದು ಹೇಳಲಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಐರೋಪ್ಯ ರಾಷ್ಟ್ರಗಳಿಗೆ ಸೂಚನೆ ನೀಡಿದೆ.
ತುರ್ತು ಸಭೆ:
ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ಹೊಸ ವೈರಸ್ ಬಗ್ಗೆ ಚರ್ಚಿಸಲು ಕೇಂದ್ರದ ಆರೋಗ್ಯ ಸಚಿವಾಲಯವು ಸೋಮವಾರ ಜಂಟಿ ಮೇಲ್ವಿಚಾರಣಾ ಸಮಿತಿಯ ತುರ್ತು ಸಭೆಯನ್ನು ಕರೆದಿದೆ. ಆರೋಗ್ಯ ಸೇವೆಗಳ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಜಂಟಿ ಮೇಲ್ವಿಚಾರಣಾ ಸಮಿತಿಯು ಸೋಮವಾರ ಸಭೆ ಸೇರಿ ಹೊಸ ವೈರಸ್ ಬಗ್ಗೆ ಚರ್ಚೆ ನಡೆಸಲಿದೆ. ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿಯಾಗಿರುವ ಡಾ. ರಾಡ್ರಿಕೊ ಎಚ್. ಆಫ್ರಿನ್ ಅವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.