ನವದೆಹಲಿ: ಯುಎಇ ಮೂಲದ ಭಾರತದ ಬಿಲಿಯನೇರ್ ಬಿಆರ್ ಶೆಟ್ಟಿಯ ಫಿನಾಬ್ಲರ್ ಪಿಎಲ್‌ಸಿ ಕಂಪನಿಯು ತನ್ನ ವ್ಯವಹಾರವನ್ನು ಇಸ್ರೇಲಿ ಮತ್ತು ಯುಎಇ ಒಕ್ಕೂಟಕ್ಕೆ ಕೇವಲ 1 ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡುತ್ತಿದೆ. ಅಂದರೆ ಭಾರತ ರುಪಾಯಿಗಳಲ್ಲಿ 74 ರೂಪಾಯಿ ಆಗಿದೆ.
ಕಳೆದ ಜುಲೈನಲ್ಲಿ ಎನ್‌ಎಂಸಿ ಹೆಲ್ತ್ ಸಂಸ್ಥಾಪಕ ಬಿ.ಆರ್.ಶೆಟ್ಟಿ ಅವರಿಗೆ ಸೇರಿದ್ದ ಜಗತ್ತಿನ ನಾನಾ ಕಡೆಗಳಲ್ಲಿ ಇರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ದುಬೈ ನ್ಯಾಯಾಲಯ ಆದೇಶಿಸಿತ್ತು. ಶೆಟ್ಟಿ 8 ಮಿಲಿಯನ್ ಡಾಲರ್ ಗೆ ಅಧಿಕ ಸಾಲವನ್ನು ಹೊಂದಿದ್ದು ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲಿಗೆ ಆದೇಶಿಸುವಂತೆ ಬ್ಯಾಂಕ್ ಕೋರ್ಟ್ ನ ಮೊರೆ ಹೋಗಿತ್ತು.
ಇದೀಗ ಬಿಆರ್ ಶೆಟ್ಟಿಯ ಫಿನಾಬ್ಲರ್ ಪಿಎಲ್‌ಸಿ ತನ್ನ ವ್ಯವಹಾರವನ್ನು ಕೇವಲ ಒಂದು ಡಾಲರ್‌ಗೆ ಮಾರಾಟ ಮಾಡಿದೆ. ಆಶ್ಚರ್ಯ ಏನಂದ್ರೆ ಇದು ಕಳೆದ ಡಿಸೆಂಬರ್‌ನಲ್ಲಿ 1.5 ಬಿಲಿಯನ್ ಪೌಂಡ್‌ಗಳ (2 ಬಿಲಿಯನ್ ಡಾಲರ್) ಮಾರುಕಟ್ಟೆ ಮೌಲ್ಯವನ್ನು ಹೊಂದಿರುವ ಕಂಪನಿಯಾಗಿತ್ತು.
ಪಾವತಿ ಮತ್ತು ವಿದೇಶಿ ವಿನಿಮಯ ಪರಿಹಾರಗಳಿಗಾಗಿ ಹಗರಣದಿಂದಾಗಿ ಹಾನಿಗೊಳಗಾದ ಕಂಪನಿ ಫಿನಾಬ್ಲರ್, ಪ್ರಿಸ್ಮ್ ಗ್ರೂಪ್ ಆಫ್ ಇಸ್ರೇಲ್‌ನ ಅಂಗಸಂಸ್ಥೆಯಾದ ಗ್ಲೋಬಲ್ ಫಿನ್ಟೆಕ್ ಇನ್ವೆಸ್ಟ್ಮೆಂಟ್ಸ್ ಹೋಲ್ಡಿಂಗ್ (ಜಿಎಫ್‌ಐಹೆಚ್) ನೊಂದಿಗೆ "ಖಚಿತವಾದ ಒಪ್ಪಂದ" ಮಾಡಿಕೊಂಡಿದೆ ಎಂದು ಘೋಷಿಸಿತು.
ಈ ವರ್ಷದ ಆರಂಭದಲ್ಲಿ ಯುಎಇ ಮತ್ತು ಇಸ್ರೇಲ್ ಸಾಮಾನ್ಯೀಕರಣ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಯುಎಇ ಮತ್ತು ಇಸ್ರೇಲಿ ಕಂಪನಿಗಳ ನಡುವಿನ ಮೊದಲ ಮಹತ್ವದ ವಾಣಿಜ್ಯ ವಹಿವಾಟುಗಳಲ್ಲಿ ಈ ಒಪ್ಪಂದವೂ ಸೇರಿದೆ. ಅಂದಿನಿಂದ, ಬ್ಯಾಂಕಿಂಗ್‌ನಿಂದ ಹಿಡಿದು ಮೊಬೈಲ್ ಫೋನ್ ಸೇವೆಗಳವರೆಗಿನ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಇಸ್ರೇಲ್‌ನ ಹಣಕಾಸು ಸಚಿವಾಲಯವು ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 2 ಬಿಲಿಯನ್ ನಿಂದ ಡಾಲರ್‌ನಿಂದ ಪ್ರಾರಂಭಿಸಿ 6.5 ಬಿಲಿಯನ್ ವರೆಗೆ ನಿರ್ಮಿಸುವ ಸಾಮರ್ಥ್ಯವನ್ನು ಎದುರು ನೋಡುತ್ತಿದೆ.
ಬಿಲಿಯನೇರ್ ಪಾತಾಳಕ್ಕೆ ಕುಸಿದಿದ್ದು ಹೇಗೆ?
ಕಳೆದ ಡಿಸೆಂಬರ್ 17ರಂದು ಅಮೆರಿಕದ ಹೂಡಿಕೆ ಸಂಸ್ಥೆ ಮುಡ್ಡಿ ವಾಟರ್ಸ್ ತನ್ನ ವರದಿಯಲ್ಲಿ, ಬಿ ಆರ್ ಶೆಟ್ಟರ ಎನ್‌ಎಂಸಿ ಕಂಪನಿಯು ಮಾರುಕಟ್ಟೆ ಮೌಲ್ಯಕ್ಕಿಂತ ಭಾರಿ ಹೆಚ್ಚಿನ ಮೊತ್ತ ನೀಡಿ ಆಸ್ತಿ ಸ್ವಾಧೀನ ಮಾಡಿದೆ ಎಂದು ಆರೋಪಿಸಿತ್ತು. ಕಂಪನಿ ತನ್ನ ನಗದು ಬ್ಯಾಲೆನ್ಸ್ ಮತ್ತು ಸಾಲದ ಬಗ್ಗೆ ವಾಸ್ತವಾಂಶಗಳನ್ನು ಮರೆಮಾಚಿದೆ ಎಂದು ದೂರಿತ್ತು. ಎನ್‌ಎಂಸಿ ಹೆಲ್ತ್ ಸಂಸ್ಥೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿವೆ. ಸಾಲ ಪಡೆಯುವ ಸಲುವಾಗಿ ಎನ್‌ಎಂಸಿ ಹೆಲ್ತ್ ಸಂಸ್ಥೆಯ ಷೇರುಗಳನ್ನು ಬ್ಯಾಂಕ್‌ಗಳಲ್ಲಿ ಅಡ ಇಡಲಾಗಿದ್ದು, ಈ ವಿಚಾರವನ್ನು ಮುಚ್ಚಿಡಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.
ಈ ಬೆಳವಣಿಗೆಗಳಿಂದಾಗಿ 2019ರ ಡಿಸೆಂಬರ್‌ನಿಂದ ಇಲ್ಲಿಯವರೆಗೆ ಎಂಎನ್‌ಸಿ ಹೆಲ್ತ್‌ನ ಷೇರುಗಳ ದರದಲ್ಲಿ ಭಾರೀ ಕುಸಿತ ಕಂಡಿದೆ. ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತವಾದ ಬಳಿಕ, ಷೇರುದಾರರು ತಿರುಗಿಬಿದ್ದಿದ್ದರು. ಆ ಬಳಿಕ ಎಂಎನ್‌ಸಿ ಹೆಲ್ತ್‌ಕೇರ್ ಅಧ್ಯಕ್ಷ ಸ್ಥಾನಕ್ಕೆ ಶೆಟ್ಟಿ ರಾಜೀನಾಮೆ ನೀಡಿದ್ದರು. ಅವರು ಮಾತ್ರವಲ್ಲದೆ ಎನ್‌ಎಂಸಿಯ ಉಪಾಧ್ಯಕ್ಷ ಖಲೀಫಾ ಬುಟ್ಟಿ ಮತ್ತು ಇತರ ನಾಲ್ವರು ಮಂಡಳಿ ನಿರ್ದೇಶಕರು ರಾಜೀನಾಮೆ ಸಲ್ಲಿಸಿದ್ದರು.