ನವದೆಹಲಿ: ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿರುವವರು ಕನಿಷ್ಠ 500 ರೂಪಾಯಿ ಬ್ಯಾಲೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ 100 ರೂ. ದಂಡ ಮತ್ತು ಜಿಎಸ್‌ಟಿ ವಿಧಿಸಲಾಗುವುದು ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.
ಈ ಹೊಸ ನಿಯಮಗಳು ಡಿಸೆಂಬರ್ 11ರಿಂದ ಜಾರಿಗೆ ಬಂದಿದ್ದು, ಉಳಿತಾಯ ಖಾತೆ ಹೊಂದಿರುವವರು ಡಿಸೆಂಬರ್ ಕೊನೆಯ ಹೊತ್ತಿಗೆ ಖಾತೆಯಲ್ಲಿ 500 ರೂಪಾಯಿ ಹೊಂದಿರಬೇಕಾಗುತ್ತದೆ. ಉಳಿತಾಯ ಖಾತೆಗೆ ಪ್ರಸ್ತುತ ವಾರ್ಷಿಕ ಶೇಕಡಾ 4ರ ಬಡ್ಡಿಯನ್ನು ನೀಡುತ್ತದೆ.
"ಹಣಕಾಸಿನ ವರ್ಷದ ಕೊನೆಯಲ್ಲಿ ಖಾತೆ ಬಾಕಿ 500 ರೂ. ಇರಿಸದಿದ್ದಲ್ಲಿ 100 ರೂ.ಗಳನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಮತ್ತು ಖಾತೆಯಲ್ಲಿ ಹಣ ಬಾಕಿ ಇಲ್ಲದಿದ್ದರೆ ಸ್ವಯಂಚಾಲಿತವಾಗಿ ಅಕೌಂಟ್ ಮುಚ್ಚಲ್ಪಡುತ್ತದೆ" ಎಂದು ಹೊಸ ನಿಯಮ ಹೇಳುತ್ತದೆ.
ಅಂಚೆ ಕಚೇರಿ ಉಳಿತಾಯ ಖಾತೆ ತೆರೆಯಲು 500 ರೂ. ಠೇವಣಿಯಾಗಿದ್ದರೆ, ನಂತರದ ಕನಿಷ್ಠ ಠೇವಣಿ 10 ರೂ. ಹಾಗೂ ಕನಿಷ್ಠ ವಾಪಸಾತಿ ಮೊತ್ತ 50 ರೂ. ಆಗಿದ್ದು, ಠೇವಣಿಗೆ ಗರಿಷ್ಠ ಮಿತಿಯಿಲ್ಲ. ಖಾತೆಯಲ್ಲಿ 500 ರೂ.ಗಿಂತ ಕಡಿಮೆ ಹಣವಿದ್ದರೆ ವಿತ್‌ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
ಸತತ ಮೂರು ಹಣಕಾಸು ವರ್ಷಗಳವರೆಗೆ ಖಾತೆಯಲ್ಲಿ ಯಾವುದೇ ವಹಿವಾಟು ಇಲ್ಲದಿದ್ದರೆ, ಖಾತೆಯು ಮುಚ್ಚಲ್ಪಡುತ್ತವೆ. ಅಂತಹ ಖಾತೆಗಳನ್ನು ಮತ್ತೆ ಪ್ರಾರಂಭಿಸಲು ಗ್ರಾಹಕರು ಅರ್ಜಿಯೊಂದಿಗೆ ಹೊಸ ಕೆವೈಸಿ ದಾಖಲೆಗಳು, ಪಾಸ್‌ಬುಕ್ ಅನ್ನು ಸಲ್ಲಿಸಬೇಕು.