ನವದೆಹಲಿ: ಭಾರತದ ಹಲವಾರು ಪ್ರಮುಖ ಬ್ರಾಂಡ್ ಕಂಪನಿಗಳ ಜೇನುತುಪ್ಪದಲ್ಲಿ ಸಕ್ಕರೆ ಪಾಕದ ಕಲಬೆರಕೆಯಾಗಿದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (ಸಿಎಸ್‌ಇ) ಹೇಳಿದ ಬಳಿಕ, ಡಾಬರ್ ಹಾಗೂ ಮಾರಿಕೊ ಕಂಪನಿಗಳು ಪರಸ್ಪರ ಜೇನುತುಪ್ಪ ಶುದ್ಧತೆ ಪರೀಕ್ಷೆಗೆ ಮುಂದಾಗಿದ್ದು, ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ(ಎಎಸ್‌ಸಿಐ) ಮೆಟ್ಟಿಲೇರಿವೆ.
ಮಾರಿಕೊನ ಸಫೊಲಾ ಹನಿ, ಮಾರ್ಕ್‌ಫೆಡ್‌ನ ಸೊಹ್ನಾ ಮತ್ತು ನೇಚರ್ ನಕ್ಟಾ ಈ ಮೂರು ಕಂಪನಿಗಳಿಗೆ ಸಿಎಸ್‌ಇ ತನ್ನ ವರದಿಯಲ್ಲಿ ಮಾಡಿದ್ದ ಆರೋಪವನ್ನು, ಎಲ್ಲಾ ಪರೀಕ್ಷೆಗಳನ್ನು ತೆರವುಗೊಳಿಸಿದೆ. ಅದರಲ್ಲೂ ಮಾರಿಕೊನ ''ಶೇಕಡಾ 100ರಷ್ಟು ಪರಿಶುದ್ಧ ಜೇನು'' ಹಕ್ಕಿನ ವಿರುದ್ಧ ಡಾಬರ್ ಸಿಟ್ಟಿಗೆದ್ದಿದ್ದು, ಮಾರಿಕೊನ ಸಫೊಲಾ ಹನಿ ವಿರುದ್ಧ ದೂರು ನೀಡಲು ಡಾಬರ್ ಯೋಚಿಸಿದೆ.
ಸಿಎಸ್‌ಇ ಇತ್ತೀಚೆಗಷ್ಟೇ ದೇಶದ ಪ್ರಮುಖ ಬ್ರಾಂಡ್‌ಗಳಾದ ಡಾಬರ್, ಪತಂಜಲಿ, ಬೈದ್ಯನಾಥ್, ಜಂಡೂ, ಹಿಟ್ಕರಿ ಮತ್ತು ಆಪಿಸ್ ಹಿಮಾಲಯದ ಜೇನುತುಪ್ಪದ ಮಾದರಿಗಳು ಶುದ್ಧತೆಯ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ವರದಿ ನೀಡಿದ ಬಳಿಕ ಈ ಹನಿಗೇಟ್ ವಿವಾದ ಹುಟ್ಟುಕೊಂಡಿದೆ. ಈ ಬ್ರಾಂಡ್‌ಗಳಲ್ಲಿ ಶೇಕಡಾ 77 ರಷ್ಟು ಸಕ್ಕರೆ ಪಾಕವನ್ನು ಸೇರಿಸುವುದರೊಂದಿಗೆ ಕಲಬೆರಕೆ ಮಾಡಲಾಗಿದೆ ಎಂದು ವರದಿ ಮಾಡಿದೆ.
ಈ ಕಂಪನಿಗಳು ತಮ್ಮ ಉತ್ಪನ್ನಗಳ ಎನ್‌ಎಂಆರ್ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ಹೇಳಿಕೊಂಡರೂ ಸಿಎಸ್‌ಇ ಈ ಬ್ರಾಂಡ್‌ಗಳು ಪ್ರಮುಖ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಅವುಗಳ ಹಕ್ಕನ್ನು ತಿರಸ್ಕರಿಸಿದೆ.
ಇದರ ನಡುವೆ ಎನ್‌ಎಂಆರ್ ಪರೀಕ್ಷೆಯ ಬಗ್ಗೆ ಡಾಬರ್ ಹೇಳಿಕೆಯನ್ನು ಪ್ರಶ್ನಿಸಿ ಮಾರಿಕೊ ಡಿಸೆಂಬರ್ 3 ರಂದು ದೂರು ದಾಖಲಿಸಿದೆ. ಎಎಸ್‌ಸಿಐ ದೂರನ್ನು ಒಪ್ಪಿಕೊಂಡಿದೆ ಮತ್ತು ಹೆಚ್ಚಿನ ವಿಚಾರಣೆಗೆ ದಾಖಲೆಯನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ವಿಶೇಷವೆಂದರೆ, ಮಾರಿಕೊ ತನ್ನ ಎನ್‌ಎಂಆರ್ ಶುದ್ಧ ಜೇನು ಹಕ್ಕುಗಳನ್ನು ಪರೀಕ್ಷಿಸಿದ ಬಗ್ಗೆ ಅಕ್ಟೋಬರ್‌ನಲ್ಲಿ ಡಾಬರ್ ವಿರುದ್ಧ ದೂರು ದಾಖಲಿಸಿತ್ತು, ಇದೀಗ ಅದನ್ನು ಎಎಸ್‌ಸಿಐ ಎತ್ತಿಹಿಡಿದಿದೆ.