ಪತ್ತನಂತಿಟ್ಟ: ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಲ್ಡಿಎಫ್ ಅಭ್ಯರ್ಥಿ 'ಮೋದಿ' ! - ಹೀಗೊಂದು ಶೀರ್ಷಿಕೆ ನೋಡಿದರೆ ಎಂಥವರೂ ಒಮ್ಮೆ ತಿರುಗಿ ನೋಡದೇ ಇರಲಾರರು. ಮೋದಿ ಹೆಸರಿಗಷ್ಟು ಪವರ್ ಇದೆ. ಆ ಹೆಸರಿನ ಶಕ್ತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಜಾಣ್ಮೆ ಎಂದೂ ಹೇಳಬಹುದು.
ಪತ್ತನಂತಿಟ್ಟದ ಎಲ್ಡಿಎಫ್ ಅಭ್ಯರ್ಥಿ ಹೆಸರು ಮೋದಿ ಎಂದೇ ಪ್ರಚಾರ ಮಾಡಲಾಗುತ್ತಿದೆ. ಅಭ್ಯರ್ಥಿಯ ಹೆಸರು ಜಿಜೋ ಮೋದಿ. ಪ್ರತಿಯೊಬ್ಬರೂ ಅವರನ್ನು ಮೋದಿ ಎಂದೇ ಗುರುತಿಸುತ್ತಾರಂತೆ. ಅವರ ಹೆಸರಿನ ಹಿಂದೊಂದು ಸ್ಟೋರಿ ಇದೆ. ಅವರ ನಿಜವಾದ ಹೆಸರು ಜಿಜೋ ಮೊದಿಯಿಲ್. ತಂದೆಯ ಹೆಸರು ಜಾರ್ಜ್ ಮೊದಿಯಿಲ್. ಶಾಲಾ ದಾಖಲಾತಿ ವೇಳೆ ಜಿಜೋ ಮೊದಿಯಿಲ್ ಹೆಸರನ್ನು ಜಿಜೋ ಮೋದಿ ಎಂದು ಬದಲಾಯಿಸಿದ್ದರು ಅವರು. ಜಾರ್ಜ್ ಮೋದಿ, ಜಿಜೋ ಮೋದಿ ಎಂದು ಬದಲಾಯಿತು ಅಪ್ಪ-ಮಗನ ಹೆಸರು. ಜಾರ್ಜ್ ಮೋದಿ ಕಾಂಗ್ರೆಸ್ ನೇತಾರ. ಮಗ ಜಿಜೋ ಮೋದಿ ಎಲ್ಡಿಎಫ್ ನಾಯಕ.
ಪ್ರಚಾರಕ್ಕೆ ಹೋದಲ್ಲಿ ನೀನು ಪಿಎಂ ಮೋದಿಯವರ ಪ್ರತಿನಿಧಿಯೇ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ನಾನು ಸಿಎಂ ಅವರ ಪ್ರತಿನಿಧಿ ಎಂದು ಹೇಳುತ್ತ ಬಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಭಿಮಾನವಿದೆ. ಅವರ ಹೆಸರಿನ ಪ್ರಭಾವದ ಕಾರಣ ನನಗೂ ಸ್ಥಳೀಯವಾಗಿ ಒಂದಿಷ್ಟು ಗೌರವ ಸಿಕ್ಕಿದೆ ಎಂದು ಜಿಜೋ ಮೋದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.