ತಿರುವನಂತಪುರಂ: ತೀವ್ರ ಒತ್ತಡಗಳ ಬಳಿಕ ಶಬರಿಮಲೆ ಸನ್ನಿಧಿಗೆ ತೆರಳುವ ಭಕ್ತರ ಸಂಖ್ಯೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಅದರ ನಡುವೆ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದ ಸುತ್ತಮುತ್ತ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು ಆತಂಕ ಮೂಡಿಸಿವೆ. ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ವರದಿಯಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ 91ಕ್ಕೆ ಏರಿಕೆಯಾಗಿದ್ದು, ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ತೀವ್ರ ಪರಾಮರ್ಶೆಗೆ ಒಳಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಶಬರಿಮಲೆಗೆ ಆಗಮಿಸುತ್ತಿರುವ ಭಕ್ತರು ಮತ್ತು ಅಲ್ಲಿ ಇರುವ ಸಿಬ್ಬಂದಿಗಳಲ್ಲಿ ನಡೆಸಲಾಗಿರುವ ಕೋವಿಡ್ ಪರೀಕ್ಷೆಗಳಲ್ಲಿ ಯಾವುದೇ ಪ್ರಮುಖ ಸಾಮೂಹಿಕ ಸೋಂಕು ಪ್ರಸರಣ ಕಂಡುಬಂದಿಲ್ಲ. ಒಂದು ವೇಳೆ ಗುಂಪುಗಳಲ್ಲಿ ಸೋಂಕು ಹರಡುವಿಕೆ ಕಂಡುಬಂದರೆ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರುವುದು ಅನಿವಾರ್ಯವಾಗಲಿದೆ.
ಶಬರಿಮಲೆಯಲ್ಲಿ ಯಾತ್ರೆಯ ಅವಧಿಯಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ತೀವ್ರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಲ್ಲಿಗೆ ತೆರಳುವ ಪ್ರತಿ ಭಕ್ತರೂ ಕೋವಿಡ್ ನೆಗೆಟಿವ್ ವರದಿಯನ್ನು ಕೊಂಡೊಯ್ಯುವುದು ಕಡ್ಡಾಯ. ಸನ್ನಿಧಿಯಲ್ಲಿಯೂ ಸಾಮಾಜಿಕ ಅಂತರ ಮತ್ತು ಸುರಕ್ಷತೆಗೆ ಗಮನ ಹರಿಸಲಾಗಿದೆ.
ದೇವಾಲಯದ ಅರ್ಚಕರು ಕೂಡ ಸೋಂಕಿಗೆ ತುತ್ತಾದರೆ ದೈನಂದಿನ ಪೂಜೆ ಪುನಸ್ಕಾರ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದು ಹಿಂದೂ ಐಕ್ಯ ವೇದಿ ಸಂಘಟನೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಅರ್ಚಕರಿಗೆ ಸೋಂಕು ತಗುಲದಂತೆ ಅತಿ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.