ತಿರುವನಂತಪುರ: ಪರಿಸರ ಸ್ನೇಹಿ ಕಾರ್ಯಕ್ರಮಗಳಿಗೆ ಒತ್ತು ನೀಡುವ ಸಲುವಾಗಿ ಕೇರಳ ಸರ್ಕಾರ ಹರಿತ ಕೇರಳಂ ಮಿಷನ್ ಎಂಬ ಕಾರ್ಯಕ್ರಮ ಜಾರಿಗೊಳಿಸಿದೆ.
ಈ ಕಾರ್ಯಕ್ರಮದಡಿ, ಸರ್ಕಾರಿ ಕಚೇರಿಗಳಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸಲು ಉತ್ತೇಜನ ನೀಡಲಾಗುತ್ತದೆ. ಇಂಥ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಚೇರಿಗಳನ್ನು 'ಹಸಿರು' ಕಚೇರಿಗಳೆಂದು ಘೋಷಿಸಲಾಗುತ್ತದೆ.
'ಪರಿಸರ ಸ್ನೇಹಿ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕಚೇರಿಗಳಿಗೆ ಜನವರಿ 26ರಂದು 'ಹಸಿರು ಪ್ರಮಾಣಪತ್ರ'ವನ್ನು ವಿತರಿಸಲಾಗುವುದು' ಎಂದು ಹರಿತ ಕೇರಳಂ ಮಿಷನ್‌ನ ಅಧಿಕಾರಿಗಳು ಹೇಳಿದ್ದಾರೆ.
'ರಾಜ್ಯದ ಜಲಮೂಲಗಳಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ಮಣ್ಣಿನ ಗುಣಮಟ್ಟ ಸಂರಕ್ಷಣೆ ಹಾಗೂ ರಾಜ್ಯದಲ್ಲಿ ನೈರ್ಮಲ್ಯ ಕಾಪಾಡುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಮಿಷನ್‌ನಡಿ ಅರ್ಹ ಕಚೇರಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ' ಎಂದು ಮಿಷನ್‌ನ ಜಿಲ್ಲಾ ಸಮನ್ವಯಾಧಿಕಾರಿ ಡಿ.ಹುಮಾಯೂನ್ ಹೇಳಿದರು.