ಕೋಲ್ಕತ್ತ: ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಮುಂದಿನ ಎರಡು ದಿನಗಳ ಒಳಗೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಬೋಲ್‌ಪುರದಲ್ಲಿ ಮಾತನಾಡಿದ ಅವರು, ನಾಳೆ ಅಥವಾ ನಾಡಿದ್ದು ತೋಮರ್ ಅವರು ರೈತರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಮಾತುಕತೆಯ ಸಮಯದ ಬಗ್ಗೆ ಖಚಿತ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ಗಡಿಗಳಲ್ಲಿ ಸುಮಾರು ನಾಲ್ಕು ವಾರಗಳಿಂದ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿನಿಧಿಗಳ ಜತೆ ಸರ್ಕಾರವು ಹಲವು ಸುತ್ತುಗಳ ಮಾತುಕತೆ ನಡೆಸಿದ್ದರೂ ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ. ಕಾಯ್ದೆ ಹಿಂಪಡೆಯಲಾಗದು, ತಿದ್ದುಪಡಿಗೆ ಸಿದ್ಧ ಎಂದು ಸರ್ಕಾರ ಹೇಳಿದ್ದರೆ, ರೈತರೂ ತಮ್ಮ ನಿಲುವಿಗೇ ಅಂಟಿಕೊಂಡಿದ್ದಾರೆ.