ನವದೆಹಲಿ: ಅಮೆರಿಕಾದ ಹೆಚ್ ಡಿಟಿ ಸಹಯೋಗದೊಂದಿಗೆ ಜೆನ್ನೋವಾ ಬಯೋಫಾರ್ಮಾಸ್ಯೂಟಿಕಲ್ಸ್ ಅಭಿವೃದ್ಧಿಪಡಿಸಿರುವ ಕೋವಿಡ್- 19 ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( ಡಿಸಿಜಿಐ) ಬುಧವಾರ ಷರತ್ತುಬದ್ಧ ಅನುಮತಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲು ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ನೀಡುವಂತೆ ಸಂಸ್ಥೆ ಸಲ್ಲಿಸಿದ ಪ್ರಸ್ತಾವನೆಯನ್ನು ಚರ್ಚಿಸಿದ ಕೋವಿಡ್-19 ಕುರಿತ ವಿಷಯ ತಜ್ಞರ ಸಮಿತಿಯ ಶಿಫಾರಸುಗಳನ್ನು ಡಿಸಿಜಿಐ ಅನುಮೋದಿಸಿದೆ.
ಎರಡನೇ ಹಂತದ ಪ್ರಯೋಗ ನಡೆಸುವ ಮುನ್ನ ಮೊದಲ ಹಂತದ ಮಧ್ಯಂತರ ಫಲಿತಾಂಶವನ್ನು ಸಮಿತಿಗೆ ಸಲ್ಲಿಸಬೇಕು ಎಂಬ ಷರತ್ತಿನೊಂದಿಗೆ ಮೊದಲು ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಸಮಿತಿ ಅನುಮತಿಗೆ ಶಿಫಾರಸು ಮಾಡಿದೆ ಎಂದು ಎಸ್ ಇಸಿ ಹೇಳಿದೆ.
ಅಮೆರಿಕಾದ ಹೆಚ್ ಡಿಟಿ ಬಯೋಟೆಕ್ ಕಾರ್ಪೋರೇಷನ್ ಸಹಯೋಗದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಎಂಆರ್ ಎನ್ ಎ ಲಸಿಕೆಯನ್ನು ಜೆನ್ನೋವಾ ಅಭಿವೃದ್ಧಿಪಡಿಸಿದೆ.