ಬದಿಯಡ್ಕ: ಸ್ಥಳೀಯಾಡಳಿತ ಚುನಾವಣೆಗಳಲ್ಲಿ ವಿಜಯ ಸಾಧಿಸಿದ ಜಿಲ್ಲೆಯ ಪರಿಶಿಷ್ಟ ಜಾತಿ ಜನಪ್ರತಿನಿಧಿಗಳಿಗೆ ಅಧಿಕಾರ ಗದ್ದುಗೆ ನೀಡಬೇಕೆಂದು ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ವಸಂತ ಅಜಕ್ಕೋಡು ವಿವಿಧ ರಾಜಕೀಯ ಮುಖಂಡರಲ್ಲಿ ವಿನಂತಿಸಿದ್ದಾರೆ.
ಪರಿಶಿಷ್ಟ ಜಾತಿ ಜನಪ್ರತಿನಿಧಿಗಳು ತೀರಾ ಅವಗಣನೆಗೆ ಒಳಗಾಗುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಈ ಅಮಾನವೀಯತೆಯನ್ನು ಪಾಲಿಸುತ್ತಾ ಬಂದಿವೆ. ಇತ್ತೀಚೆಗೆ ನಡೆದ ತ್ರಿಸ್ಥರ ಪಂಚಾಯಿತಿ, ನಗರಸಭೆ, ಕಾಪೆರ್Çೀರೇಷನ್‍ಗಳಲ್ಲಿ ಪರಿಶಿಷ್ಟ ಜಾತಿಯ ಸ್ಪರ್ಧಾಳುಗಳು ಬಹುಸಂಖ್ಯೆಯಲ್ಲಿ ಗೆಲುವು ಸಾಧಿಸಿದ್ದಾರೆ. ಅವರನ್ನು ಅಧಿಕಾರದ ಪೀಠಕ್ಕೇರಿಸಲು ಯಾವುದೇ ರಾಜಕೀಯ ಪಕ್ಷಗಳು ಮುಂದೆ ಬರುತ್ತಿಲ್ಲ. ಅವರಿಗೆ ಸರಿಯಾದ ಸ್ಥಾನಮಾನ ಲಭಿಸಬೇಕು, ಸ್ಥಳೀಯ ಆಡಳಿತ ಸಂಸ್ಥೆ ಅಧ್ಯಕ್ಷರಾಗಿ ಅವರನ್ನು ನೇಮಿಸಬೇಕು ಎಂದು ವಸಂತ ಅಜಕ್ಕೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಹುಮತದಿಂದ ಗೆದ್ದ ಪರಿಶಿಷ್ಟ ಜಾತಿ ಸದಸ್ಯರು ಕೆಲವು ಸ್ಥಳೀಯ ಆಡಳಿತ ಸಂಸ್ಥೆಯಲ್ಲಿ ಆಡಳಿತದ ನಿರ್ಣಾಯಕ ಶಕ್ತಿಯಾಗಿದ್ದಾರೆ. ಅವರ ಬೆಂಬಲವಿಲ್ಲದೆ ಕೆಲವು ರಾಜಕೀಯ ಪಕ್ಷಗಳು ಆಡಳಿತ ನಡೆಸುವಂತಿಲ್ಲ ಆದ್ದರಿಂದ ಬೆಂಬಲ ನೀಡಿದ ಅಥವಾ ಸ್ವತಂತ್ರ ಅಭ್ಯರ್ಥಿಗಳಿಗಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಪರಿಶಿಷ್ಟ ಜಾತಿ ಜನಪ್ರತಿನಿಧಿಗಳಿಗೆ ಅಧಿಕಾರದ ಸ್ಥಾನ ನೀಡಬೇಕೆಂದು ವಸಂತ ಅಜಕ್ಕೋಡು ವಿನಂತಿಸಿದ್ದಾರೆ.