ತಿರುವನಂತಪುರಂ: ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಆಧಾರಿತ ಮಲಯಾಳಂ ಚಿತ್ರ 'ವರ್ಥಮಾನಂ'ಗೆ ಪ್ರಮಾಣ ಪತ್ರವನ್ನು ನೀಡಲು ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಪ್ರಾದೇಶಿಕ ಕಚೇರಿಯು ನಿರಾಕರಿಸಿದೆ.
ಈ ಚಿತ್ರವನ್ನು ಸಿದ್ಧಾರ್ಥ್ ಶಿವ ಅವರು ನಿರ್ದೇಶಿಸಿದ್ದಾರೆ. ಪಾರ್ವತಿ ತಿರುವೊತು ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ಕೇರಳದ ಮಹಿಳೆಯೊಬ್ಬರು ಸಂಶೋಧನೆಯಲ್ಲಿ ತೊಡಗಲು ಜೆಎನ್‌ಯುಗೆ ಬರುತ್ತಾರೆ. ಈ ಮಹಿಳೆಯ ಜೆಎನ್‌ಯು ಪಯಣದ ಮೇಲೆ ಈ ಸಿನಿಮಾ ಆಧಾರಿತವಾಗಿದೆ. ಆದರೂ ಸಿನಿಮಾಗೆ ಪ್ರಮಾಣ ಪತ್ರವನ್ನು ನೀಡಲು ಸಿಬಿಎಫ್‌ಸಿ ತಿರಸ್ಕರಿಸಿದೆ. ಇದಕ್ಕೆ ಕಾರಣ ಏನೆಂಬುದನ್ನು ತಿಳಿಸಿಲ್ಲ. ಹಾಗಾಗಿ ಈ ವಾರವೇ 'ವರ್ಥಮಾನಂ' ಸಿನಿಮಾವನ್ನು ಮುಂಬೈನ ಪ್ರಮಾಣೀಕರಣ ಮಂಡಳಿಯ ಪರಿಷ್ಕರಣಾ ಸಮಿತಿಗೆ ಕಳುಹಿಸಲಾಗುವುದು' ಎಂದು ಸಿನಿಮಾ ನಿರ್ಮಾಪಕ, ಕಥೆಗಾರ ಆರ್ಯದನ್ ಶೌಕತ್ ತಿಳಿಸಿದರು.
'ಈ ಸಿನಿಮಾವನ್ನು ಪರಿಷ್ಕರಣಾ ಸಮಿತಿಗೆ ಸಲ್ಲಿಸಬೇಕಾಗುತ್ತದೆ ಎಂದು ಸಿಬಿಎಫ್‌ಸಿ ಅಧಿಕಾರಿಗಳು ಹೇಳಿದ್ದರು. ಆದರೆ, ಅದಕ್ಕೆ ಕಾರಣ ಏನು ಎಂದು ಹೇಳಲಿಲ್ಲ. ನಾನು ಈ ಸಿನಿಮಾದ ಕಥೆ ಬರೆಯುವುದಕ್ಕೂ ಮುನ್ನ ಹಲವು ತಿಂಗಳು ಸಂಶೋಧನೆ, ಅಧ್ಯಯನಗಳನ್ನು ಮಾಡಿದ್ದೇನೆ. ಜೆಎನ್‌ಯು ಕ್ಯಾಂಪಸ್‌ನ ಜೀವನ ಶೈಲಿ, ಸಂಸ್ಕೃತಿ ಬಗ್ಗೆ ತಿಳಿಯಲು ಹಲವು ದಿನ ದೆಹಲಿಯಲ್ಲೇ ಉಳಿದಿದ್ದೆ' ಎಂದು ಅವರು ಹೇಳಿದರು.
'ಡಿಸೆಂಬರ್ 31 ರೊಳಗೆ ಈ ಸಿನಿಮಾಕ್ಕೆ ಸಮ್ಮತಿ ಸಿಗದಿದ್ದಲ್ಲಿ, ಸಿನಿಮಾವನ್ನು ಯಾವುದೇ ಪ್ರಶಸ್ತಿಗಾಗಿ ಕಳುಹಿಸಲು ಸಾಧ್ಯವಿಲ್ಲ. ರಾಜಕೀಯ ಕಾರಣಗಳಿಂದ ಸಿನಿಮಾಕ್ಕೆ ಪ್ರಮಾಣ ಪತ್ರವನ್ನು ನೀಡಲು ನಿರಾಕರಿಸಲಾಗಿದೆ. ಮಂಡಳಿಯಲ್ಲಿ ಹಲವು ರಾಜಕೀಯ ವ್ಯಕ್ತಿಗಳಿದ್ದಾರೆ. ಅವರಿಗೆ ಸಿನಿಮಾದ ಬಗ್ಗೆ ಏನೂ ತಿಳಿದಿಲ್ಲ' ಎಂದು ಅವರು ಆರೋಪಿಸಿದ್ದಾರೆ.