ತಿರುವನಂತಪುರ: ಕೇರಳದ ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ ಕೋವಿಡ್ ಪರೀಕ್ಷಾ ಶುಲ್ಕವನ್ನು ಕಡಿತಗೊಳಿಸುವ ಬೇಡಿಕೆ ತೀವ್ರಗೊಳ್ಳುತ್ತಿದೆ.
ನೆರೆಯ ಎಲ್ಲಾ ರಾಜ್ಯಗಳಲ್ಲಿ ಆರ್‍ಟಿಪಿಸಿಆರ್ ಪರೀಕ್ಷಾ ದರ ರೂ.1000 ಕ್ಕಿಂತ ಕಡಿಮೆಯಿದ್ದರೆ, ಕೇರಳದಲ್ಲಿ ಇದು ರೂ. .2000 ಕ್ಕಿಂತ ಮೇಲ್ಪಟ್ಟಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಪ್ರಸ್ತುತ, ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪೀಡಿತರಿರುವ ಕೇರಳವು ಆರ್‍ಟಿಪಿಸಿಆರ್ ಪರೀಕ್ಷೆಗೆ ಹೆಚ್ಚಿನ ಶುಲ್ಕ ವಿಧಿಸುತ್ತಿದೆ. ಹೆಚ್ಚಿನ ಜಿಲ್ಲೆಗಳಲ್ಲೂ 2100 ರೂ. ಮತ್ತು ಅದಕ್ಕಿಂತಲೂ ಹೆಚ್ಚು ವಸೂಲು ಮಾಡಲಾಗುತ್ತಿದೆ. ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಖಾಸಗಿ ಹಂತಗಳಲ್ಲಿನ ಕೋವಿಡ್ ತಪಾಸಣೆ ಪ್ರಮಾಣವನ್ನು ಹಲವಾರು ಹಂತಗಳಲ್ಲಿ ತೀವ್ರವಾಗಿ ಕಡಿಮೆ ಮಾಡಿದೆ.
ಆರ್‍ಟಿಪಿಸಿಆರ್ ಪರಿಶೀಲನೆಗಾಗಿ 3,000 ರೂ. ವರೆಗೆ ಶುಲ್ಕ ವಿಧಿಸುತ್ತಿದ್ದ ಮಹಾರಾಷ್ಟ್ರದಲ್ಲಿ ಈಗ ದರ 700 ರೂ. ಆಂಧ್ರಪ್ರದೇಶದಲ್ಲಿ ಐದು ನೂರು ಮತ್ತು ಕರ್ನಾಟಕದಲ್ಲಿ ಶುಲ್ಕ 800 ರೂ. ಪಡೆಯಲಾಗುತ್ತಿದೆ.
ಈ ಮಧ್ಯೆ ರಾಜ್ಯ ಸರ್ಕಾರಕ್ಕೆ ಖಾಸಗೀ ಆಸ್ಪತ್ರೆ ಮತ್ತು ಲ್ಯಾಬ್ ಗಳ ಮೇಲೆ ಯಾವುದೇ ಹಿಡಿತವಿಲ್ಲದಿರುವುದು ವೇದ್ಯವಾಗುತ್ತಿದ್ದು, ಹೆಚ್ಚಿನ ಶುಲ್ಕ ವಸೂಲಾತಿಯ ಬಗ್ಗೆ ಚಕಾರವೆತ್ತದಿರುವುದು ಆಶ್ಚರ್ಯಕ್ಕೆ ಎಡೆಮಾಡಿದೆ.