ವಿಶ್ವಸಂಸ್ಥೆ (ನ್ಯೂಯಾರ್ಕ್): ಸೌರಶಕ್ತಿ ಮತ್ತು ಉದ್ದಿಮೆ ಪರಿವರ್ತನೆ ಪ್ರಕ್ರಿಯೆಯ ನಾಯಕತ್ವವನ್ನು ಭಾರತ ವಹಿಸಿಕೊಂಡಿರುವುದರಿಂದ, ಹವಾಮಾನ ಗುರಿಗಳನ್ನು ಜಗತ್ತು ಸಾಧಿಸಬಹುದು ಎಂದು ನಂಬಲು ಸಾಧ್ಯವಾಗಿದೆ ಎಂದು ವಿಶ್ವಸಂಸ್ಥೆಯ ಉಪ ಮಹಾಕಾರ್ಯದರ್ಶಿ ಅಮೀನಾ ಮುಹಮ್ಮದ್ ಹೇಳಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಬಳಿಕ, ತಮ್ಮ ಆರ್ಥಿಕತೆಗಳನ್ನು ಪುನರಾರಂಭಿಸುವತ್ತ ಸರಕಾರಗಳು ದೃಷ್ಟಿ ಹರಿಸಿದ್ದು, ಸುಸ್ಥಿರ, ಪುಟಿದೇಳುವ, ನ್ಯಾಯೋಚಿತ ಮತ್ತು ಗರಿಷ್ಠ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಪುನಶ್ಚೇತನ ಕಾರ್ಯಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
'ಪೀಪಲ್ ಆಯಂಡ್ ಕ್ಲೈಮೇಟ್- ಜಸ್ಟ್ ಟ್ರಾನ್ಸಿಶನ್ ಇನ್ ಪ್ರಾಕ್ಟೀಸ್' ಎಂಬ ವಿಷಯದಲ್ಲಿ ಕಳೆದ ವಾರ ನಡೆದ ಆನ್‌ಲೈನ್ ಸೆಮಿನಾರ್‌ನಲ್ಲಿ ಮಾತನಾಡಿದ ಅಮೀನಾ ಮುಹಮ್ಮದ್, ಹವಾಮಾನ ಬದಲಾವಣೆಯನ್ನು ಎದುರಿಸಲು ನಡೆಸಲಾಗುತ್ತಿರುವ ಜಾಗತಿಕ ಪ್ರಯತ್ನಗಳನ್ನು ವಿವರಿಸಿದರು.
''ಇಂದು ನಾವು ಭರವಸೆಯ ಸುದ್ದಿಯನ್ನು ಕೇಳುತ್ತಿದ್ದೇವೆ: ಜಪಾನ್ ಮತ್ತು ದಕ್ಷಿಣ ಕೊರಿಯ ಸೇರಿದಂತೆ 110ಕ್ಕೂ ಅಧಿಕ ದೇಶಗಳು 2050ರ ವೇಳೆಗೆ ಪರಿಸರವನ್ನು ಇಂಗಾಲ ಮುಕ್ತಗೊಳಿಸುವುದಾಗಿ ಪಣತೊಟ್ಟಿವೆ. 2060ಕ್ಕಿಂತ ಮುಂಚೆ ತಾನು ಹೀಗೆ ಮಾಡುವುದಾಗಿ ಚೀನಾ ಹೇಳುತ್ತಿದೆ. ಸೌರಶಕ್ತಿ ಮತ್ತು ಉದ್ದಿಮೆ ಪರಿವರ್ತನೆ ಪ್ರಕ್ರಿಯೆಯ ನಾಯಕತ್ವವನ್ನು ಭಾರತ ವಹಿಸಿಕೊಂಡಿರುವುದು, ನಮ್ಮ ಪರಿಸರ ಗುರಿಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ನಾವು ಹೊಂದಲು ಕಾರಣವಾಗಿದೆ'' ಎಂದು ಅವರು ಹೇಳಿದರು.