ನವದೆಹಲಿ: ಕೊರೊನಾ ವೈರಸ್ ನ ಹೊಸ ರೂಪಾಂತರ ಪತ್ತೆಯಾಗುತ್ತಿದ್ದಂತೆ ಅದರ ಲಕ್ಷಣಗಳು, ಪರೀಕ್ಷೆ ಹಾಗೂ ಅದರ ವಿರುದ್ಧ ಲಸಿಕೆಗಳ ಸಾಮರ್ಥ್ಯದ ಕುರಿತು ಚರ್ಚೆಗಳು ನಡೆಯುತ್ತಿವೆ.
ಇದೀಗ ಈ ರೂಪಾಂತರ ಕೊರೊನಾ ವೈರಸ್ ಪತ್ತೆಗೆ ಎಷ್ಟು ಸಮಯ ಬೇಕಾಗಬಹುದು ಎಂಬ ಪ್ರಶ್ನೆ ಕೇಳಿಬಂದಿದೆ. ಈ ಹೊಸ ವೈರಾಣುವನ್ನು ಪರೀಕ್ಷೆ ನಡೆಸಿ ಕಂಡುಕೊಳ್ಳಲು 24 ಗಂಟೆ ಅವಶ್ಯಕವಿದೆ ಎಂದು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ ಐಆರ್) ನಿರ್ದೇಶಕ ವ್ಯವಸ್ಥಾಪಕ ಶೇಖರ್ ಸಿ ಮಾಂಡೆ ತಿಳಿಸಿದ್ದಾರೆ.
"ಈ ರೂಪಾಂತರ ಸೋಂಕಿನ ಮೇಲೆ ಪ್ರಸ್ತುತ ಲಭ್ಯವಿರುವ ಲಸಿಕೆಗಳೂ ಪರಿಣಾಮಕಾರಿಯಾಗಿವೆ. ಎಂಥದ್ದೇ ಸೋಂಕನ್ನು ಕೊಲ್ಲಲು ಸಮರ್ಥವಿರುವಂತೆ, ಹಲವು ಆಯಾಮಗಳಲ್ಲಿ ಲಸಿಕೆಗಳನ್ನು ರೂಪಿಸಲಾಗಿದೆ. ಈ ಲಸಿಕೆಗಳು ಮನುಷ್ಯನ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮೂಲಕ ಸೋಂಕಿನ ವಿರುದ್ಧ ಹೋರಾಡುತ್ತವೆ" ಎಂದು ಹೇಳಿದ್ದಾರೆ.
ಈ ರೂಪಾಂತರ ಸೋಂಕಿನ ಜೆನೋಮ್ ಸೀಕ್ವೆನ್ಸ್ ಪರೀಕ್ಷೆ ನಡೆಸಲು ಭಾರತದಾದ್ಯಂತ ಆರು ಲ್ಯಾಬ್ ಗಳನ್ನು ನಿಯೋಜಿಸಲಾಗಿದೆ. ಬ್ರಿಟನ್ ನಿಂದ ಮರಳಿ ಬಂದವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಬಂದರೆ, ಅವರ ಮಾದರಿಗಳನ್ನು ಈ ಲ್ಯಾಬ್ ಗಳಿಗೆ ಕಳುಹಿಸಲಾಗುತ್ತಿದೆ ಎಂದರು.
ಸದ್ಯಕ್ಕೆ ಈ ಲ್ಯಾಬ್ ಗಳಿಗೆ ಮಾದರಿಗಳನ್ನು ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದೊಂದಿಗೆ ಈ ಕಾರ್ಯ ಸಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಪರೀಕ್ಷೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.