ತಿರುವನಂತಪುರ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಸೋಲು ಮತ್ತು ರಾಜ್ಯ ಕಾಂಗ್ರೆಸ್‍ನಲ್ಲಿನ ಸಮಸ್ಯೆಗಳನ್ನು ಅವಲೋಕಿಸಿ ಬಗೆಹರಿಸಲು ಕೇರಳದ ಉಸ್ತುವಾರಿ ಹೊಂದಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಇಂದು ಕೇರಳಕ್ಕೆ ಆಗಮಿಸಿದ್ದಾರೆ. ಅವರು ನಾಳೆ ಮತ್ತು ಸೋಮವಾರ ನಾಯಕರನ್ನು ಪ್ರತ್ಯೇಕವಾಗಿ ಭೇಟಿಯಾಗುವರು. ಪಕ್ಷದ ಮರುಸಂಘಟನೆ ಸೇರಿದಂತೆ ಚರ್ಚೆಗಳು ನಡೆಯಲಿವೆ ಎಂಬ ಸೂಚನೆಗಳಿವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು ರಾಜ್ಯ ಕಾಂಗ್ರೆಸ್‍ನಲ್ಲಿ ವಾತಾವರಣ ಭುಗಿಲೆದ್ದ ಕಾರಣ ಹೈಕಮಾಂಡ್ ಮಧ್ಯಪ್ರವೇಶಿಸಿ ಪರಿಹಾರಕ್ಕೆ ಮುಂದಾಗಿದೆ.
ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಕೇಂದ್ರ ನಾಯಕತ್ವವು ಹಿರಿಯ ನಾಯಕರು ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ ಮತ್ತು ನಾಯಕರ ವಿರುದ್ಧ ವ್ಯಾಪಕವಾದ ಪೋಸ್ಟರ್‍ಗಳನ್ನು ಪೋಸ್ಟ್ ಮಾಡುವುದು ಮತ್ತು ಪ್ರತಿಕ್ರಿಯೆ ಒಳಗೊಂಡಂತೆ ಹೈಕಮಾಂಡ್‍ನ ಮುಂದೆ ವ್ಯಾಪಕ ದೂರುಗಳನ್ನು ಬಂದಿದ್ದವು.
ನಾಯಕತ್ವದ ಬದಲಾವಣೆಯ ಬಲವಾದ ಬೇಡಿಕೆಯ ಹೊರತಾಗಿಯೂ, ಮೂರು ತಿಂಗಳೊಳಗೆ ವಿಧಾನಸಭಾ ಚುನಾವಣೆ ನಡೆಯಲಿರುವ ಕೇರಳದಲ್ಲಿ, ರಾಜ್ಯ ಮಟ್ಟದಲ್ಲಿ ದೊಡ್ಡ ಮಟ್ಟದ ಬದಲಾವಣೆ ಅಸಾಧ್ಯವೆಂದು ಹೈಕಮಾಂಡ್ ಅಂದಾಜಿಸಿದೆ. ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ವಿಧಾನಸಭಾ ಚುನಾವಣೆಯ ವರೆಗೆ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯಿದೆ.
ಆದರೆ ತಾರಿಕ್ ಅನ್ವರ್ ಅವರೊಂದಿಗಿನ ಸಭೆಯಲ್ಲಿ, ಗುಂಪು ಭಿನ್ನಾಭಿಪ್ರಾಯಗಳನ್ನು ಲೆಕ್ಕಿಸದೆ ನಾಯಕರು ಮುಲ್ಲಪ್ಪಳ್ಳಿ ವಿರುದ್ಧ ನಿಲುವು ತೆಗೆದುಕೊಳ್ಳುವರೇ ಎಂದು ಕಾದು ನೋಡಬೇಕಿದೆ. ಯುಡಿಎಫ್ ಕನ್ವೀನರ್ ಎಂ.ಎಂ ಹಸನ್ ಕೂಡ ಕಾಂಗ್ರೆಸ್ಸ್ ನಾಯಕರ ವಿರುದ್ದ ಹೇಳಿಕೆ ನೀಡತೊಡಗಿರುವುದು ಪಕ್ಷದಲ್ಲಿ ಕಳವಳಕ್ಕೆ ಕಾರಣವಾಗಿದೆ. ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲರನ್ನು ಟೀಕಿಸಿದವರು ತಾರಿಕ್ ಅನ್ವರ್ ಅವರಲ್ಲೂ ಈ ಬಗ್ಗೆ ಧ್ವನಿಯೆತ್ತುವರೇ ಎಂದು ಎಲ್ಲರೂ ನೋಡುತ್ತಿದ್ದಾರೆ.
ಅನೇಕ ಡಿಸಿಸಿ ಅಧ್ಯಕ್ಷರ ವಿರುದ್ಧ ಪ್ರತಿಭಟನೆಗಳು ಪ್ರಬಲವಾಗಿವೆ. ಹಲವಾರು ಜಿಲ್ಲಾ ಸಮಿತಿಗಳನ್ನು ಮರುಸಂಘಟಿಸುವ ಅಗತ್ಯವನ್ನು ಹೈಕಮಾಂಡ್ ಪರಿಗಣಿಸುವ ಸಾಧ್ಯತೆಯಿದೆ. ಒಂದು ಡಜನ್‍ಗಿಂತಲೂ ಹೆಚ್ಚು ಡಿಸಿಸಿಗಳು ರೂಪುಗೊಳ್ಳುವ ಸಾಧ್ಯತೆಯೂ ಇದೆ.
ಕೊಲ್ಲಂ, ಪಾಲಕ್ಕಾಡ್, ತಿರುವನಂತಪುರ, ಇಡುಕಿ ಮತ್ತು ಎರ್ನಾಕುಳಂನ ಡಿಸಿಸಿ ಅಧ್ಯಕ್ಷರು ಬದಲಾಗುವುದು ಬಹುತೇಕ ಖಚಿತ. ಈ ಪೈಕಿ ಪಾಲಕ್ಕಾಡ್ ಮತ್ತು ಎರ್ನಾಕುಳಂನ ಡಿಸಿಸಿ ಅಧ್ಯಕ್ಷರು ಸ್ಪರ್ಧಿಸಿ ಚುನಾವಣೆಯಲ್ಲಿ ಜಯಗಳಿಸಿದ್ದರು. ಅವರನ್ನು ಬದಲಾಯಿಸಿದರೆ ತೀವ್ರ ಪ್ರತಿಭಟನೆಗಳು ಪಕ್ಷದೊಳಗೇ ಬುಗಿದೇಳುವ ಸಾಧ್ಯತೆಯೂ ಇದೆ.
ನಾಳೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಪಾಲ್ಗೊಳ್ಳಲಿರುವ ತಾರಿಕ್ ಅನ್ವರ್ ಅವರು ಸಮಿತಿ ಸದಸ್ಯರೊಂದಿಗೆ ವಿಶೇಷ ಸಭೆ ನಡೆಸಲಿದ್ದಾರೆ. ಎರಡು ದಿನಗಳ ಕಾಲ ಕೇರಳದಲ್ಲಿರುವ ತಾರಿಕ್ ಅನ್ವರ್, ಪ್ರತಿಯೊಬ್ಬ ಶಾಸಕರು, ಸಂಸದರು ಮತ್ತು ಕೆಪಿಸಿಸಿ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಎಲ್ಲಾ ವಿವರಗಳನ್ನು ಸಂಗ್ರಹಿಸಿ ಬಳಿಕ ವರದಿಯನ್ನು ಹೈಕಮಾಂಡ್‍ಗೆ ಸಲ್ಲಿಸಲಾಗುವುದು.