ಟೋಕಿಯೋ: ಚಿರ ಯೌವನ ಪಡ್ಕೊಳ್ಳುವ ಮನುಷ್ಯ ಪ್ರಯತ್ನ ಇಂದು ನಿನ್ನೆಯದಲ್ಲ. ಅದಕ್ಕೆ ಪೂರಕವಾದ ಸುದ್ದಿಯೊಂದು ಹೊರಬಿದ್ದಿದೆ. ಆಯಸ್ಸು ಹೆಚ್ಚಿಸುವ ಔಷಧ ಅಭಿವೃದ್ಧಿ ಪಡಿಸುವುದಕ್ಕೆ ನಿರಂತರ ಪ್ರಯತ್ನ ನಡೆದಿದ್ದು, ಒಂದು ಔಷಧದಲ್ಲಿ ಅಂತಹ ಗುಣ ಇರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರಂತೆ!
ಜಪಾನಿನ ಒಸಾಕಾ ಸಿಟಿ ಯೂನಿವರ್ಸಿಟಿಯ ಸಂಶೋಧಕರ ಅಧ್ಯಯನ ಇದನ್ನು ದೃಢೀಕರಿಸಿದೆ. 50 ವರ್ಷಗಳಿಂದ ಬಳಕೆಯಲ್ಲಿರುವ ಮೆಟೋಲಝೋನ್ ಎಂಬ ರಕ್ತದೊತ್ತಡದ ಔಷಧದಲ್ಲಿ ಜೀವಿತಾವಧಿ ಹೆಚ್ಚಿಸುವ ಅಂಶವಿದೆ. ಇದನ್ನು ದುಂಡುಹುಳುಗಳ ಮೇಲೆ ಪ್ರಯೋಗಿಸಿದ್ದು, ಅವುಗಳ ಸೆಲ್ಯುಲಾರ್ ದುರಸ್ತಿ ಪ್ರಕ್ರಿಯೆಯಲ್ಲಿ ಬಳಕೆಯಾಗಿದೆ. ಈ ಮೆಕಾನಿಸಂ ಅನ್ನು ಮನುಷ್ಯರ ಜೀವ ಕೋಶಗಳ ಮೇಲೂ ಪ್ರಯೋಗಿಸಬಹುದು ಎಂಬುದು ಈ ಸಂಶೋಧಕರ ತಂಡದ ಪ್ರತಿಪಾದನೆ.
ಮೈಟೋಕಾಂಡ್ರಿಯಾ ಎಂಬುದು ಸೆಲ್ಯುಲಾರ್ ಪವರ್ ಪ್ಲಾಂಟ್ಸ್ ಮಾದರಿಯಲ್ಲಿರುವಂತಹ ಚಿಕ್ಕ ರಚನೆಯಾಗಿದೆ. ನಮಗೆ ವಯಸ್ಸಾಗುತ್ತ ಇದ್ದಂತೆ ಮೈಟೋಕಾಂಡ್ರಿಯಾ ಹೆಚ್ಚು ಹೆಚ್ಚು ನಿಶ್ಶಕ್ತಿಗೊಳ್ಳುತ್ತ ಕ್ಷೀಣಿಸುತ್ತ ಸಾಗುತ್ತದೆ. ಕೆಲವೊಮ್ಮೆ ಇದರಿಂದಾಗಿ ಮೈಟೋಕಾಂಡ್ರಿಯಲ್ ಅನ್ಫೋಲ್ಡೆಡ್ ಪ್ರೊಟೀನ್ ರೆಸ್ಪಾನ್ಸ್ ಹಾನಿಗೀಡಾಗುತ್ತದೆ. ಈ ಹೊಸ ಮೆಕಾನಿಸಂ ಇಂತಹ ಹಾನಿಯನ್ನು ದುರಸ್ತಿ ಮಾಡುವ ಕೆಲಸ ಮಾಡುತ್ತದೆ. ಪರಿಣಾಮ ಆಯಸ್ಸು ವೃದ್ಧಿಯಾಗುತ್ತದೆ. ಈ ಅಂಶವನ್ನು ದುಂಡುಹುಳುವಿನ ಮೇಲೆ ರಕ್ತದೊತ್ತಡದ ಔಷಧದ ಪ್ರಯೋಗ ಮಾಡಿದಾಗ ಪತ್ತೆ ಹಚ್ಚಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.