ನವದೆಹಲಿ: ಮುಂದಿನ ಎರಡು ವರ್ಷಗಳಲ್ಲಿ ಹೆದ್ದಾರಿಗಳ ಟೋಲ್‍ಗಳು ಇರುವುದಿಲ್ಲ. ಹೆಚ್ಚು ಕುಷಿ ಪಡಬೇಡಿ. ಟೋಲ್ ಇರುವುದಿಲ್ಲ ಎಂಬ ಮಾತ್ರಕ್ಕೆ ಟೋಲ್ ಶುಲ್ಕ ಕಟ್ಟುವಂತಿಲ್ಲ ಎಂಬರ್ಥವಲ್ಲ. ನೀವು ಎಲ್ಲೇ ಓಡಾಡಿದರೂ ನಿಮ್ಮ ಬ್ಯಾಂಕ್ ಖಾತೆಯಿಂದ ಟೋಲ್‍ನ ಹಣ ಕಡಿತಗೊಳ್ಳಲಿದೆ..! ನಿನ್ನೆ ಅಸೊಚೋಮ್‍ನ ಸಂಸ್ಥಾಪನಾ ವಾರಾಚರಣೆಯಲ್ಲಿ ಮಾತನಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಮುಂದಿನ ಎರಡು ವರ್ಷಗಳಲ್ಲಿ ಜಿಪಿಆರ್‍ಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ.
ರಷ್ಯಾ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡು ನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಎರಡು ವರ್ಷಗಳ ನಂತರ ಟೋಲ್‍ಗಳು ಇರುವುದಿಲ್ಲ. ಹಾಗೆಂದು ಟೋಲ್ ಶುಲ್ಕ ಪಾವತಿಸುವಂತಿಲ್ಲ ಎಂದರ್ಥವಲ್ಲ. ಜಿಪಿಎಸ್ ತಂತ್ರಜ್ಞಾನ ನೀವು ಸಂಚರಿಸುವ ಮಾರ್ಗಗಳನ್ನು ಗುರುತಿಸಲಿದ್ದು, ಆ ಭಾಗದಲ್ಲಿ ಅನ್ವಯವಾಗುವ ಟೋಲ್ ದರವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಿದೆ.
ಈ ಹೊಸ ವ್ಯವಸ್ಥೆಯಿಂದ ಟೋಲ್‍ಗೇಟ್‍ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಹಣ ಪಾವತಿಸುವ ಸಮಸ್ಯೆ ಇರುವುದಿಲ್ಲ. ಸಮಯ ವ್ಯಯ ಆಗುವುದಿಲ್ಲ. ಜಿಪಿಎಸ್ ತಂತ್ರಜ್ಞಾನ ಜಾರಿಗೆ ಬಂದ ಬಳಿಕ ಟೋಲ್‍ಗಳಲ್ಲಿ ಉಂಟಾಗಬಹುದಾದ ಕಿರಿಕಿರಿಗೂ ಮುಕ್ತಿ ಸಿಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಇನ್ನು ಮುಂದೆ ಉತ್ಪಾದನೆಗೊಳ್ಳುವ ಎಲ್ಲಾ ವಾಣಿಜ್ಯ ವಾಹನಗಳಿಗೂ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಲಾಗುತ್ತಿದೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಜಿಪಿಎಸ್ ಆಧಾರಿದ ಟೋಲ್ ವ್ಯವಸ್ಥೆಯಿಂದ ಮುಂದಿನ ಐದು ವರ್ಷಗಳಲ್ಲಿ 1.34 ಲಕ್ಷ ಕೋಟಿ ಆದಾಯ ಸಂಗ್ರಹವಾಗಲಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 34 ಸಾವಿರ ಕೋಟಿ ರೂ. ಸಂಗ್ರಹವಾಗಲಿದೆ. ಇದರಿಂದ ದೇಶದ ಜಿಡಿಪಿಯಲ್ಲಿ ಶೇ.2ರಷ್ಟು ಬೆಳವಣಿಗೆಯಾಗುವ ನಿರೀಕ್ಷೆ ಇದೆ ಎಂದು ಗಡ್ಕರಿ ತಿಳಿಸಿದ್ದಾರೆ.
ಕಳೆದ 2014ರಿಂದ ಎಲ್ಲಾ ಹೆದ್ದಾರಿಗಳಲ್ಲಿ ಫಾಸ್ಟ್‍ಟ್ಯಾಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದರೆ, ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಆದರೂ ಈಗಲೂ ಫಾಸ್ಟ್ ಟ್ಯಾಗ್ ವ್ಯವಸ್ಥೆ ಜಾರಿಯಲ್ಲಿದೆ.
ಈ ನಡುವೆ ಕೆಲವು ಸಂಘಟನೆಗಳು, ವಿವಿಐಪಿ ವರ್ಗ ಹಾಗೂ ನಾನಾ ರೀತಿಯ ಪ್ರಭಾವಿಗಳು ಟೋಲ್‍ಗಳಲ್ಲಿ ಹಣ ನೀಡದೆ ಸಂಚರಿಸುತ್ತಿದ್ದಾರೆ. ಪಿಆರ್‍ಎಸ್ ತಂತ್ರಜ್ಞಾನ ಜಾರಿಗೆ ಬಂದ ಬಳಿಕ ಈ ಎಲ್ಲವುಗಳಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ.