ತಿರುವನಂತಪುರಂ: ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವು ಬುಧವಾರದಂದು ಪ್ರಕಟವಾಗಲಿದೆ. ಹಲವು ಯುಡಿಎಫ್, ಎಲ್‌ಡಿಎಫ್ ನಡುವಿನ ನೇರ ಸ್ಪರ್ಧೆಯ ನಡುವೆ ಬಿಜೆಪಿ ನೇತೃತ್ವದ ಎನ್ಡಿಎ ಹಲವು ಪಾಲಿಕೆ, ನಗರಸಭೆ, ಪಂಚಾಯಿತಿಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ.
ಇಡುಕ್ಕಿ ಜಿಲ್ಲೆಯ ಕಾಂಚಿಯಾರ್ ಪಂಚಾಯಿತಿಯಲ್ಲಿ ಲೆಫ್ಟ್ ಡೆಮಾಕ್ರಾಟಿಕ್ ಫ್ರಂಟ್ (ಎಲ್‌ಡಿಎಫ್) ಬಹುಮತ ಗಳಿಸಿದರೂ ವಿಜಯೋತ್ಸವ ಸಂಭ್ರಮ ಕಂಡು ಬಂದಿಲ್ಲ. 16 ಸ್ಥಾನಗಳ ಪೈಕಿ ಎಲ್‌ಡಿಎಫ್ 9 ಹಾಗೂ ಯುಡಿಎಫ್ 6 ಸ್ಥಾನ ಗಳಿಸಿದ್ದು, ಬಿಜೆಪಿಯ ಏಕೈಕ ಅಭ್ಯರ್ಥಿ ಗೆಲುವು ಸಾಧಿಸಿದ್ದು, ಚೇರ್ಮನ್ ಸ್ಥಾನ ಲಭಿಸಲಿದೆ. ಚೇರ್ಮನ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಇದಕ್ಕೆ ಸೂಕ್ತವಾದ ವಿಜೇತ ಅಭ್ಯರ್ಥಿಯೆಂದರೆ ಬಿಜೆಪಿಯ ಸುರೇಶ್ ಕುಳಿಕಟ್ಟು ಮಾತ್ರ. ಎಲ್‌ಡಿಎಫ್ ಹಾಗೂ ಯುಡಿಎಫ್ ನಲ್ಲಿ ಎಸ್ ಸಿ ಮೀಸಲು ಅಭ್ಯರ್ಥಿ ಗೆಲುವು ಸಾಧಿಸಿಲ್ಲ.
ಕಾಂಚಿಯಾರ್ ಪಂಚಾಯಿತಿಯ 8ನೇ ವಾರ್ಡಿನಿಂದ ಗೆದ್ದಿರುವ ಸುರೇಶ್ ಅವರು ಇಲ್ಲಿ ಗೆದ್ದ ಮೊದಲ ಬಿಜೆಪಿ ಅಭ್ಯರ್ಥಿಯಾಗಿದ್ದು, ಮೊದಲ ಗೆಲುವಲ್ಲೇ ಚೇರ್ಮನ್ ಪಟ್ಟ ದಕ್ಕಿದೆ.
ಅಡುಗೆ ಪರಿಕರಗಳನ್ನು ಮಾರಾಟ ಮಾಡುವ ಖಾಸಗಿ ಸಂಸ್ಥೆ ಹೊಂದಿರುವ ಸುರೇಶ್ (43) ಅವರು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಎಲ್‌ಡಿಎಫ್ ಪ್ರಾಬಲ್ಯದ ಪಂಚಾಯಿತಿಯನ್ನು ಗೆದ್ದ ಸಂಭ್ರಮದಲ್ಲಿರುವ ಸುರೇಶ್ ಅವರು ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇವೆ ಎಂದಿದ್ದಾರೆ.
941 ಗ್ರಾಮ ಪಂಚಾಯಿತಿಯ 15,962ವಾರ್ಡ್, 152 ಬ್ಲಾಕ್ ಪಂಚಾಯಿತಿಯ 2080 ವಾರ್ಡು, 14 ಜಿಲ್ಲಾ ಪಂಚಾಯಿತಿಯ 331 ಡಿವಿಷನ್, 86 ಮುನ್ಸಿಪಾಲಿಟಿಯ 3078 ವಾರ್ಡು, 6 ಮುನ್ಸಿಪಲ್ ಕಾರ್ಪೊರೇಷನ್ ನ 414 ವಾರ್ಡುಗಳಿಗೆ ಡಿಸೆಂಬರ್ 8, 10 ಹಾಗೂ 14ರಂದು ಮತದಾನ ನಡೆಸಲಾಗಿ, ಒಟ್ಟಾರೆ, 76% ಮತದಾನ ದಾಖಲಾಗಿತ್ತು. ಡಿಸೆಂಬರ್ 16ರಂದು ಫಲಿತಾಂಶ ಹೊರ ಬಂದಿದೆ.