ಬದಿಯಡ್ಕ: ಇಲ್ಲಿನ ಬಸ್ ನಿಲ್ದಾಣ ಪರಿಸರದ ಮೊಬೈಲ್ ಟವರ್‍ನ ಮೇಲೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ 73 ರ ವೃದ್ಧರೋರ್ವರನ್ನು ಆರ್‍ಡಿಒ ಸಮಾಧಾನಪಡಿಸಿ ಕೆಳಗಿಸಿದ ಘಟನೆ ನಡೆದಿದೆ.
ನಾರಂಪಾಡಿ ನೆಲ್ಯಡ್ಕದ ಮೋಹನ್‍ದಾಸ್ ಸೋಮವಾರ ಮುಂಜಾನೆ ಟವರ್‍ನ ಮೇಲೇರಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದು, ವಿಷಯ ತಿಳಿದು ಅಗ್ನಿಶಾಮಕ ದಳ ಹಾಗು ಪೆÇಲೀಸರು ಸ್ಥಳಕ್ಕೆ ಧಾವಿಸಿ ಕೆಳಗಿಳಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆರ್‍ಡಿಒ ಬಿ.ಜೆ.ಶಂಸುದ್ದೀನ್ ಬೆಳಗ್ಗೆ 9.30 ಕ್ಕೆ ಸ್ಥಳಕ್ಕೆ ತಲುಪಿ ಮೋಹನ್‍ದಾಸ್ ಅವರೊಂದಿಗೆ ಧ್ವನಿವರ್ಧಕದ ಮೂಲಕ ಮಾತನಾಡಿ ಸಮಾಧಾನಪಡಿಸಿದರು.
ನಾರಂಪಾಡಿ ನೆಲ್ಯಡ್ಕದಲ್ಲಿ ಮೋಹನ್‍ದಾಸ್ ಅವರ ಪತ್ನಿ ಸತಿ ಅವರು 15 ವರ್ಷಗಳ ಹಿಂದೆ ಸ್ಥಳ ಖರೀದಿಸಿದ್ದರು. ಆದರೆ ಸ್ಥಳ ನೋಂದಾಯಿಸಲು ಅಗತ್ಯದಷ್ಟು ಛಾಪಾ ಕಾಗದ ಉಪಯೋಗಿಸಿಲ್ಲವೆಂಬ ಕಾರಣದಿಂದ ಸತಿ ಅವರ ಹೆಸರಿನಲ್ಲಿ ಕಾರಡ್ಕದಲ್ಲಿರುವ ಒಂದು ಸೆಂಟ್ ಸ್ಥಳವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಈ ಸ್ಥಳವನ್ನು ವಾಪಸು ಮಾಡಬೇಕೆಂದು ಆಗ್ರಹಿಸಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾರೆ.
13 ವರ್ಷಗಳ ಹಿಂದೆ ಮೋಹನ್‍ದಾಸ್ ಬದಿಯಡ್ಕ ಕಚೇರಿ ಮುಂಭಾಗದ ಮರವನ್ನೇರಿ ಆತ್ಮಹತ್ಯೆ ಯತ್ನ ನಡೆಸಿದ್ದರು. ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಆತ್ಮಹತ್ಯೆ ಬೆದರಿಕೆಯೊಡ್ಡಿದ್ದರು.