ನವದೆಹಲಿ: ಕೇಂದ್ರ ಸರ್ಕಾರದ ನೂತನ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿವಿಧ ರೈತಪರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆಯ ಉದ್ದೇಶವನ್ನು ಸರ್ಕಾರ ಹೊಂದಿದ್ದರೂ ಯಾವುದೇ ಸರ್ಕಾರದ ಪ್ರತಿನಿಧಿಗಳು ಪ್ರತಿಭಟನಾಕಾರರೊಂದಿಗೆ ಮಾತನಾಡಲು ಪ್ರತಿಭಟನಾ ಸ್ಥಳಕ್ಕೆ ಬಂದಿಲ್ಲ ಎಂದು ಉತ್ತರ ಪ್ರದೇಶದ ರೈತ ಗುಲ್ಜಾರ್ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೂತನ ಕಾನೂನು ವಿರೋಧಿಸಿ ದೆಹಲಿ-ಘಾಜಿಪುರ್ ಗಡಿಯಲ್ಲಿ ಇತರ ಸುಮಾರು 350 ಮಂದಿ ಹಾಗೂ ನೆರೆಯ ಉತ್ತರ ಖಂಡ್ ರೈತರೊಂದಿಗೆ ಬಿಡಾರ ಹೂಡಿರುವ ಉತ್ತರ ಪ್ರದೇಶದ ರೈತ ಗುಲ್ಜಾರ್ ಸಿಂಗ್ , ನಾವು ಹೋರಾಡಲು ಇಲ್ಲಿಲ್ಲ. ನಮ್ಮದು ಏನು ಎಂಬುದನ್ನು ಒತ್ತಾಯಿಸಲು ಇಲ್ಲಿದ್ದೇವೆ ಎನ್ನುತ್ತಾರೆ. ಹೊಸ ಕಾನೂನುಗಳನ್ನು ಬಯಸಿರಲಿಲ್ಲ, ಅವುಗಳಿಂದ ತೊಂದರೆಗಳೇ ಹೆಚ್ಚು ಎಂದು ಶಹಜಾನ್ ಪುರದ ಸಿಂಗ್ ಕಡಿಮುರಿದಂತೆ ಹೇಳಿದರು.
ಪ್ರತಿಭಟನಾ ನಿರತ ರೈತರಲ್ಲಿ ಅನೇಕ ಮಂದಿ ಭಾರತೀಯ ಕಿಸಾನ್ ಯೂನಿಯನ್ ಗೆ ಸೇರಿದವರಾಗಿದ್ದು, ಕೇಂದ್ರ ಸರ್ಕಾರದ ನೂತನ ಮೂರು ಕಾನೂನುಗಳು ರೈತ ವಿರೋಧಿಯಾಗಿವೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಹಕ್ಕನ್ನೇ ಕಸಿದುಕೊಳ್ಳಲಿವೆ ಎಂದು ಹಲವು ರೈತರು ಆರೋಪಿಸಿದರು. ಮಕ್ಕಳನ್ನು ಮನೆಗೆ ವಾಪಸ್ ಕಳುಹಿಸಿ ಮತ್ತೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದಾಗಿ ರೈತ ಮಹಿಳೆಯೊಬ್ಬರು ಹೇಳಿದರು.
ದೆಹಲಿ- ಘಾಜಿಪುರ ಗಡಿಯಲ್ಲಿ ವಾರದಿಂದಲೂ ಬಿಡಾರ ಹೂಡಿರುವ ರೈತರು, ಘಾಜಿಪುರ ಮೇಲ್ಸುತುವೆ ಕೆಳಗಡೆ ಆಶ್ರಯ ಪಡೆಯುತ್ತಾರೆ. ಕೆಲವರು ರಾತ್ರಿ ವೇಳೆಯಲ್ಲಿ ಸ್ನೇಹಿತರು, ಸಂಬಂಧಿಕರ ಮನೆಗೆ ತೆರಳಿ ಬೆಳಗ್ಗೆ ಹೊತ್ತು ಪ್ರತಿಭಟನೆಗೆ ವಾಪಸಾಗುತ್ತಿದ್ದಾರೆ.