ಬೆಂಗಳೂರು: ಅಘಾತಕಾರಿ ಬೆಳವಣಿಗೆಯಲ್ಲಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಉಪ ಸಭಾಪತಿ, ಜೆಡಿಎಸ್ ಮುಖಂಡ ಎಸ್.ಎಲ್. ಧರ್ಮೇಗೌಡ (65) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿನ್ನೆ (ಡಿ. 28) ರಾತ್ರಿ ಸುಖರಾಯಪಟ್ಟಣದ ತೋಟದ ಮೆನೆಯಿಂದ ತೆರಳಿದ್ದರು. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಗುಣಸಾಗರ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮವಾರ ರಾತ್ರಿ ಖಾಸಗಿ ಟ್ರೈವರ್ ಕರೆದುಕೊಂಡು ಮನೆಯಿಂದ ಸ್ಯಾಂಟ್ರೋ ಕಾರಿನಲ್ಲಿ ತೆರಳಿದ್ದರು. ರಾತ್ರಿಯಾದರೂ ವಾಪಸ್ ಬಾರದ ಕಾರಣ ಗನ್ ಮ್ಯಾನ್, ಪೊಲೀಸರು, ಸ್ಥಳೀಯರು ಹುಡುಕಾಟ ನಡೆಸಿದ್ದರು. ಖಾಸಗಿ ಡ್ರೈವರ್‌ನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ ಧರ್ಮೇಗೌಡರು, ಗುಣಸಾಗರ ಸಕ್ಕರಾಯಪಟ್ಟಣದ ಬಳಿ 2 ಕಿ.ಮೀ ದೂರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಲೆ ಮುಂಡದಿಂದ ಬೇರ್ಪಟ್ಟು 100 ಮೀಟರ್ ದೂರದ ವರೆಗೆ ಹೋಗಿರುವ ಹೃದಯ ವಿದ್ರಾವಕ ಚಿತ್ರಣ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಕಂಡು ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಸಿ.ಟಿ. ರವಿ: ಘಟನಾ ಸ್ಥಳಕ್ಕೆ ಮಧ್ಯರಾತ್ರಿಯೆ ಮಾಜಿ ಸಚಿವ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಭೇಟಿ ನೀಡಿದ್ದರು. ಆದಷ್ಟು ಶೀಘ್ರವಾಗಿ ಮೃತದೇಹ ತೆರವು ಮಾಡಿ ಆಸ್ಪತ್ರೆಗೆ ರವಾನಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಿ.ಟಿ. ರವಿ ಸೂಚಿಸಿದ್ದರು.
ಆತ್ಮಹತ್ಯೆ ಸ್ಥಳದಲ್ಲಿ ಡೆತ್‌ನೋಟ್ ಪತ್ತೆ: ಉಪ ಸಭಾಪತಿ ಧರ್ಮೇಗೌಡ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಡೆತ್‌ನೋಟ್‌ನಲ್ಲಿ ಏನು ಬರೆದಿದ್ದಾರೆ ಎಂಬುದು ಗೊತ್ತಾಗಿಲ್ಲ.
ವಿಧಾನ ಪರಿಷತ್‌ನಲ್ಲಿ ನಡೆದಿದ್ದ ಹೈಡ್ರಾಮಾ: ಇತ್ತೀಚೆಗೆ ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ಮಂಡನೆ ಸಂದರ್ಭದಲ್ಲಿ ಪರಿಷತ್ ಕಲಾಪದಲ್ಲಿ ಹೈಡ್ರಾಮಾ ನಡೆದಿತ್ತು. ಆಗ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಪರಿಷತ್ ಕಲಾಪಕ್ಕೆ ಬರದಂತೆ ಬಿಜೆಪಿ ಸದಸ್ಯರು ತಡೆದಿದ್ದರು. ಅದೇ ಸಂದರ್ಭದಲ್ಲಿ ಬಲವಂತವಾಗಿ ಉಪ ಸಭಾಪತಿ ಎಸ್.ಎಲ್. ಧರ್ಮೇಗೌಡ ಅವರನ್ನು ಸಭಾಪತಿ ಪೀಠದಲ್ಲಿ ಕೂರಿಸಲಾಗಿತ್ತು. ಆಗ ಸಭಾಪತಿ ಪೀಠದಿಂದ ಅವರನ್ನು ಕಾಂಗ್ರೆಸ್ ಸದಸ್ಯರು ಬಲವಂತವಾಗಿ ಎಳೆದು ಹಾಕಲಾಗಿತ್ತು.
ತಮ್ಮನ್ನು ಸಭಾಪತಿ ಪೀಠದಿಂದ ಎಳೆದು ಹಾಕಿದ್ದನ್ನೇ ಎಸ್.ಎಲ್. ಧರ್ಮೇಗೌಡ ಅವರು ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗಿದೆ. ಇದೇ ವಿಚಾರವನ್ನು ತಮ್ಮ ಆಪ್ತರ ಬಳಿಯೂ ಧರ್ಮೇಗೌಡರು ಹಂಚಿಕೊಂಡಿದ್ದರು. ಹೀಗಾಗಿ ಧರ್ಮೇಗೌಡರ ಆತ್ಮಹತ್ಯೆಗೆ ವಿಧಾನ ಪರಿಷತ್ ಜಟಾಪಟಿಯೆ ಕಾರಣ ಎಂದು ಶಂಕಿಸಲಾಗಿದೆ.