ವಾಷಿಂಗ್ಟನ್: ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಕೊರೊನಾ ಇನ್ನಷ್ಟು ಹೆಚ್ಚಾಗಲಿದೆ ಎಂದು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ ನೀಡಿದ್ದಾರೆ.
ಬಿಲ್ ಗೇಟ್ಸ್ ಅವರ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್, ಕೋವಿಡ್ ಲಸಿಕೆ ತಯಾರಿಸುವ ಕಾರ್ಯದಲ್ಲಿ ಭಾಗಿಯಾಗಿದೆ.
ಕಳೆದ ಕೆಲವು ವಾರಗಳಲ್ಲಿ ಅಮೆರಿಕದಲ್ಲಿ ಸೋಂಕು ತೀವ್ರವಾಗಿದ್ದು ,ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಸಾವು ಸೇರಿದಂತೆ ಸೋಂಕಿನಿಂದಾಗಿ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿಯೂ ಏರಿಕೆಯಾಗುತ್ತಿದೆ.
'ಅಮೆರಿಕವು ಇಂತಹ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ ಮುಂದಿನ ನಾಲ್ಕರಿಂದ ಆರು ತಿಂಗಳು ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗಲಿದೆ. ನಾವು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸದಿದ್ದಲಿ ಹೆಚ್ಚುವರಿವಾಗಿ 2 ಲಕ್ಷಕ್ಕಿಂತ ಹೆಚ್ಚು ಜನರು ಸಾವಿಗೀಡಾಗಲಿದ್ದಾರೆ ಎಂದು ಇನ್ಸ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಎವಲ್ಯೂಷನ್ (ಐಎಚ್‌ಎಂಇ) ಎಚ್ಚರಿಸಿದೆ. ನಿಯಮಗಳನ್ನು ಪಾಲಿಸುವ ಮೂಲಕ ಇದನ್ನು ತಪ್ಪಿಸಬಹುದು' ಎಂದು ಅವರು ಹೇಳಿದರು.
'2015ರಲ್ಲಿ ಜಗತ್ತಿನಲ್ಲಿ ಸಾವು ಹೆಚ್ಚಾಗಲಿದೆ ಎಂದು ನಾನು ಹೇಳಿದ್ದೆ. ವೈರಸ್ ಇನ್ನಷ್ಟು ಜೀವಗಳನ್ನು ಬಲಿ ಪಡೆಯುವ ಸಾಧ್ಯತೆ ಇದೆ. ಆದರೆ ನಾವು ಇನ್ನೂ ಆ ಪರಿಸ್ಥಿತಿಗೆ ತಲುಪಿಲ್ಲ. ನಾನು ಐದು ವರ್ಷಗಳ ಹಿಂದೆ ಊಹಿಸಿದಕ್ಕಿಂತ ಹೆಚ್ಚಾಗಿ ಸೋಂಕು ಅಮೆರಿಕ ಮತ್ತು ಜಗತ್ತಿನ ಆರ್ಥಿಕತೆ ಮೇಲೆ ಪರಿಣಾಮ ಬೀರಿದೆ. ಇದು ನನಗೆ ಆಶ್ಚರ್ಯವನ್ನುಂಟು ಮಾಡಿದೆ' ಎಂದು ಅವರು ತಿಳಿಸಿದರು.
2015ರಲ್ಲಿ ಬಿಲ್ ಗೇಟ್ಸ್ ಅವರು ಜಾಗತಿಕ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ್ದರು.