ಕಾಸರಗೋಡು: ಕೆಂಪುಕಲ್ಲು ಕ್ವಾರಿ ಕಾರ್ಮಿಕರ ವಿರುದ್ಧ ಕಂದಾಯ ಇಲಾಖೆ ಅಧಿಕಾರಿಗಳು ತೋರುವ ದ್ರೋಹಕರ ನೀತಿ ಪ್ರತಿಭಟಿಸಿ ಬುಧವಾರ ಕೆಂಪುಕಲ್ಲು ಕ್ವಾರಿ ಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಮಂಗಳವಾರ ಕೆಂಪುಕಲ್ಲು ಸಾಗಾಟದ ನಾಲ್ಕು ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಕ್ವಾರಿ ಮಾಲಿಕರು ಮತ್ತು ಕಾರ್ಮಿಕರನ್ನು ಮತ್ತಷ್ಟು ಸಂದಿಗ್ಧಾವಸ್ಥೆಗೆ ತಳ್ಳಿದ್ದರು.
ಜಿಲ್ಲೆಯಲ್ಲಿ 4ಸಾವಿರಕ್ಕೂ ಹೆಚ್ಚು ಮಂದಿ ಕೆಂಪುಕಲ್ಲು ಕ್ವಾರಿಯನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್ ನಂತರ ನಿಬಂಧನೆಯೊಂದಿಗೆ ಕ್ವಾರಿ ಚಟುವಟಿಕೆ ಆರಂಭಿಸಲು ಅನುಮತಿ ನೀಡಿದ ಅಧಿಕಾರಿಗಳಿಂದಲೇ ಇಂದು ಕಿರುಕುಳ ಅನುಭವಿಸಬೇಕಾಗಿರುವುದಾಗಿ ಪ್ರತಿಭಟನಾಕಾರರು ದೂರಿದ್ದಾರೆ. ಕೆಂಪುಕಲ್ಲು ಕ್ವಾರಿ ಮಾಲಿಕರ ಸಂಘಟನೆ ಮಾಜಿ ಜಿಲ್ಲಾ ಅಧ್ಯಕ್ಷ ಸುಕುಮಾರನ್ ನಾಯರ್ ಧರಣಿ ಉದ್ಘಾಟಿಸಿದರು. ಅಧಿಕಾರಿಗಳ ಕಿರುಕುಳ ಮುಂದುವರಿದಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಗೆ ಸಂಘಟನೆ ಮುಂದಾಗಲಿರುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮುನೀರ್ ಭಾರತೀಯನ್ ಅಧ್ಯಕ್ಷತೆ ವಹಿಸಿದ್ದರು. ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಧರಣಿಯಲ್ಲಿ ಪಾಲ್ಗೊಂಡಿದ್ದರು.