ನವದೆಹಲಿ: ಪೃಥ್ವಿ ಕೊಣನೂರು ನಿರ್ದೇಶನದ ಕನ್ನಡದ 'ಪಿಂಕಿ ಎಲ್ಲಿ?' ಚಿತ್ರವು ಮುಂದಿನ ವರ್ಷ ಗೋವಾದಲ್ಲಿ ನಡೆಯುವ 51ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಪ್ರದರ್ಶನ ಕಾಣಲಿದೆ.
'ಪನೋರಮಾ ವಿಭಾಗದಲ್ಲಿ ಭಾರತದ 20 ಸಾಕ್ಷ್ಯ ಚಿತ್ರ ಹಾಗೂ 23 ಕಥಾ ಚಿತ್ರಗಳು (ಫೀಚರ್) ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್ ಜಾವಡೇಕರ್ ಅವರು ಶನಿವಾರ ತಿಳಿಸಿದ್ದಾರೆ.
ಒಂಬತ್ತು ದಿನಗಳ ಚಿತ್ರೋತ್ಸವವು ನವೆಂಬರ್ 20ರಿಂದ 28ರವರೆಗೂ ಆಯೋಜನೆಯಾಗಬೇಕಿತ್ತು. ಕೋವಿಡ್ ಕಾರಣದಿಂದಾಗಿ ಇದನ್ನು ಜನವರಿ 16ರಿಂದ 24ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.
'ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಭಾರತದ 20 ಸಾಕ್ಷ್ಯ ಚಿತ್ರ ಹಾಗೂ 23 ಕಥಾ ಚಿತ್ರಗಳ ಪಟ್ಟಿ ಬಿಡುಗಡೆಗೊಳಿಸಿರುವುದಕ್ಕೆ ಅತೀವ ಖುಷಿಯಾಗಿದೆ' ಎಂದು ಜಾವಡೇಕರ್ ಅವರು ಟ್ವೀಟ್ ಮಾಡಿದ್ದಾರೆ.
'ಸಾಂಡ್ ಕಿ ಆಂಖ್' ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಮೊದಲ ಕಥಾ ಚಿತ್ರವಾಗಿದೆ. ತಾಪ್ಸಿ ಪನ್ನು ಮತ್ತು ಭೂಮಿ ಪೆಡ್ನೇಕರ್ ನಟಿಸಿರುವ ಈ ಚಿತ್ರವನ್ನು ತುಷಾರ್ ಹೀರಾನಂದಾನಿ ನಿರ್ದೇಶಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್, ಶ್ರದ್ಧಾ ಕಪೂರ್ ಮುಖ್ಯ ಭೂಮಿಕೆಯ, ನಿತೇಶ್ ತಿವಾರಿ ನಿರ್ದೇಶನದ 'ಚಿಚೋರೆ', ವೆಟ್ರಿ ಮಾರನ್ ನಿರ್ದೇಶನದ 'ಅಸುರನ್' (ತಮಿಳು) ಹಾಗೂ ಮುಸ್ತಾಫ ನಿರ್ದೇಶನದ 'ಕಾಪ್ಪೆಲಾ' (ಮಲಯಾಳಂ) ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಮುಖ್ಯ ವಾಹಿನಿಯ ಚಲನಚಿತ್ರಗಳೆನಿಸಿವೆ.
ಬರಹಗಾರ ಹಾಗೂ ಚಿತ್ರ ನಿರ್ಮಾಪಕ ಜಾನ್ ಮ್ಯಾಥ್ಯೂ ಮ್ಯಾಟನ್ ನೇತೃತ್ವದ ತೀರ್ಪುಗಾರರ ಸಮಿತಿಯು ನೀಲಾ ಮಾಧವ್ ಪಾಂಡ ಅವರ 'ಖಲಿರಾ ಅತೀತ' (ಒರಿಯಾ), ಗೋವಿಂದ ನಿಹಲಾನಿ ಅವರ 'ಅಪ್, ಅಪ್ ಆಯಂಡ್ ಅಪ್', 'ಬ್ರಿಡ್ಜ್' (ಅಸ್ಸಾಂ), 'ಅವಿಜಾತ್ರಿಕ್' (ಬೆಂಗಾಲಿ), 'ಟ್ರಾನ್ಸ್' (ಮಲಯಾಳಂ) ಮತ್ತು 'ಪ್ರವಾಸ್' (ಮರಾಠಿ) ಚಿತ್ರಗಳನ್ನೂ ಆಯ್ಕೆ ಮಾಡಿದೆ.
ಹಾವೊಬಮ್ ಪಬಾನ್ ಕುಮಾರ್ ನೇತೃತ್ವದ ತೀರ್ಪುಗಾರರ ಸಮಿತಿಗೆ ಸಾಕ್ಷ್ಯ ಚಿತ್ರಗಳ ಆಯ್ಕೆಯ ಹೊಣೆ ವಹಿಸಲಾಗಿತ್ತು. ಅಂಕಿತ್ ಕೊಠಾರಿ ನಿರ್ದೇಶನದ ಗುಜರಾತಿ ಭಾಷೆಯ 'ಪಾಂಚಿಕ' ಸಿನಿಮಾವು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿರುವ ಈ ವಿಭಾಗದ ಮೊದಲ ಚಿತ್ರವೆನಿಸಿದೆ.
'100 ಇಯರ್ಸ್ ಆಫ್ ಕ್ರಿಸೊಟೊಮ್-ಎ ಬಯೋಗ್ರಫಿಕಲ್ ಫಿಲ್ಮ್', ಅಹಿಂಸ-ಗಾಂಧಿ: ದಿ ಪವರ್ ಆಫ್ ದಿ ಪವರ್‌ಲೆಸ್', 'ಜಸ್ಟೀಸ್ ಡಿಲೇಡ್ ಬಟ್ ಡಿಲವರ್ಡ್', 'ಸ್ಟಿಲ್ ಅಲೈವ್' ಮತ್ತು 'ಇನ್ವೆಸ್ಟಿಂಗ್ ಲೈಫ್' ಈ ವಿಭಾಗದಲ್ಲಿ ಪ್ರದರ್ಶನಗೊಳ್ಳಲಿರುವ ಇತರ ಪ್ರಮುಖ ಚಿತ್ರಗಳೆನಿಸಿವೆ.