ನವದೆಹಲಿ: 'ಲಂಚವನ್ನು ಪಡೆಯುವವರು ಇದ್ದಾಗ, ಕೊಡುವವರೂ ಇರುತ್ತಾರೆ. ಹೀಗಾಗಿ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲು ಆಗುವಂತೆ ಕಾಯ್ದೆ ರೂಪಿಸಲು ಸಂಸತ್ತಿಗೆ ಸೂಚಿಸಲಾಗದು' ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಈ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠವು, 'ವೈಯಕ್ತಿಕವಾಗಿ ನನ್ನ ಅಭಿಪ್ರಾಯದಂತೆ ಸಮಾಜದ ಮನಸ್ಥಿತಿ ಬದಲಾಗಬೇಕು. ಹಣ ಸ್ವೀಕರಿಸುವ ವ್ಯಕ್ತಿ ಇದ್ದಾಗ, ಅದನ್ನು ನೀಡುವ ವ್ಯಕ್ತಿಯೂ ಇರುತ್ತಾನೆ' ಎಂದು ಹೇಳಿದರು.
ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರಿಗೆ ಜೀವಾವಧಿ ಶಿಕ್ಷೆ ವಿಧಿಸಲು ಹಾಗೂ ಅವರ ಆದಾಯ ಮೀರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಲಾಗಿತ್ತು.
ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರೂ ಪೀಠದಲ್ಲಿದ್ದರು.
ಅರ್ಜಿದಾರ, ಬಿಜೆಪಿ ಮುಖಂಡ ಎ.ಕೆ. ಉಪಾಧ್ಯಾಯ ಅವರಿಗೆ ಅರ್ಜಿ ಹಿಂಪಡೆಯಲು ಸೂಚಿಸಿದ ನ್ಯಾಯಪೀಠ, ಶಿಕ್ಷೆ ಕುರಿತ ತಮ್ಮ ಚಿಂತನೆ ಸಂಬಂಧ ಕಾನೂನು ಆಯೋಗಕ್ಕೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ಮಾಡಿತು. ಉಪಾಧ್ಯಾಯ ಅವರು 'ಒಂದು ಆದರ್ಶ ಪರಿಸ್ಥಿತಿ'ಯನ್ನು ಬಯಸುತ್ತಿದ್ದಾರೆ ಎಂದು ಹೇಳಿತು.