ನವದೆಹಲಿ: ಕಾಂಗ್ರೆಸ್ ನಾಯಕರೊಂದಿಗೆ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶನಿವಾರದಂದು ಮಾತುಕತೆ ನಡೆಸಿರುವ ಬೆನ್ನಲ್ಲೇ ಪಕ್ಷದ ಯುವ ಘಟಕದ ಮುಖ್ಯಸ್ಥೆ ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳಿಗೆ ಸಾಕಷ್ಟು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ.
ಎನ್ಎಸ್ಯುಐನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ರುಚಿ ಗುಪ್ತಾ ರಾಜೀನಾಮೆ ನೀಡಿರುವ ನಾಯಕಿ. ಈಕೆ ರಾಹುಲ್ ಗಾಂಧಿಯವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರಾಗಿದ್ದಾರೆ. ಪಕ್ಷದಲ್ಲಿ ಸಾಂಸ್ಥಿಕ ಬದಲಾವಣೆಗಳಿಗಾಗಿ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೆ ನಿರಂತರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿದ್ದೇನೆ. ನನಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ರಾಹುಲ್ ಜೀ ಮತ್ತು ಸೋನಿಯಾ ಜೀಗೆ ಧನ್ಯವಾದಗಳು ಎಂದು ರುಚಿ ಗುಪ್ತಾ ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರನ್ನಾಗಿ ರಾಹುಲ್ ಗಾಂಧಿಯವರನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡಿರುವ ಅವರು, 'ಪಕ್ಷಕ್ಕೆ ಸೂಕ್ತ ನಾಯಕತ್ವದ ಅವಶ್ಯಕತೆ ಇದೆ. ಕಾಂಗ್ರೆಸ್, ಪಕ್ಷದ ಮತ್ತು ಸಂಘಟನೆಯ ಸಮಸ್ಯೆಗಳನ್ನು ಬಗೆಹರಿಸಬೇಕು. ತಳಮಟ್ಟದ ಸಂಪರ್ಕವನ್ನು ಸರಿಪಡಿಸಿಕೊಳ್ಳಬೇಕು ಮತ್ತು ಬಲವಾದ ಉನ್ನತ-ನಾಯಕತ್ವವನ್ನು ಸ್ಥಾಪಿಸಬೇಕಾಗಿದೆ. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೇರುವುದು ಉತ್ತಮ ಆಯ್ಕೆಯಾಗಿದೆ' ಎಂದು ಹೇಳಿದ್ದಾರೆ.