ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವ ಟ್ರ್ಯಾವಂಕೋರ್ ದೇವಸ್ವಂ ಮಂಡಳಿಯು ಶಬರಿಮಲೆಯಲ್ಲಿನ ಹರಾಜಾಗದ ಅಂಗಡಿಗಳನ್ನು ಹರಾಜು ಹಾಕಲು ಮುಂದಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಗೆ ಮಿತಿ ಹೇರಿರುವುದರಿಂದ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಇದರ ಪರಿಣಾಮವಾಗಿ ದೇವಸ್ವಂ ಮಂಡಳಿಗೆ ಈ ಅವಧಿಯಲ್ಲಿ ಸುಮಾರು 35 ಕೋಟಿ ರೂ ನಷ್ಟ ಉಂಟಾಗಿದೆ ಎನ್ನಲಾಗಿದೆ. ಈಗ ಭಕ್ತರ ಸಂಖ್ಯೆ ಹೆಚ್ಚಿಸಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳ ಮರು ಹರಾಜಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾಮಾನ್ಯವಾಗಿ ಶಬರಿಮಲೆ ಯಾತ್ರೆ ಆರಂಭವಾದ ಅವಧಿಯಲ್ಲಿ ಪ್ಲಾಪಳ್ಳಿಯಿಂದ ಸನ್ನಿಧಾನದವರೆಗೆ 252 ಅಂಗಡಿಗಳನ್ನು ಹರಾಜಿಗೆ ಹಾಕಲಾಗುತ್ತದೆ. ಇವುಗಳಲ್ಲದೆ ಪ್ಲಾಪಳ್ಳಿಯಿಂದ ನಿಳಕ್ಕಳ್‌ವರೆಗೆ ತಾತ್ಕಾಲಿಕ ಶೆಡ್‌ಗಳನ್ನು ಕೂಡ ಹರಾಜಿಗೆ ಒಳಪಡಿಸಲಾಗುತ್ತದೆ. ಆದರೆ ಈ ಬಾರಿ ಯಾವುದೇ ರೀತಿಯ ಹರಾಜು ಪ್ರಕ್ರಿಯೆಗೆ ಮುಂದಾಗಿರಲಿಲ್ಲ.
ನಿಳಕ್ಕಳ್, ಸನ್ನಿಧಾನ ಮತ್ತು ಪಂಪಾಗಳಲ್ಲಿ ಕೆಲವೇ ಬೆರಣಿಕೆಯಷ್ಟು ಸಂಖ್ಯೆಯ ಅಂಗಡಿಗಳನ್ನು ಹರಾಜು ಹಾಕಲಾಗಿತ್ತು. ಕಳೆದ ವರ್ಷ ದೇವಸ್ವಂ ಮಂಡಳಿಯು ಅಂಗಡಿಗಳ ಹರಾಜಿನಿಂದ 46 ಕೋಟಿ ರೂ ಆದಾಯ ಗಳಿಸಿತ್ತು. ಆದರೆ ಈ ಬಾರಿ ಕೇವಲ ಮೂರು ಕೋಟಿ ರೂ ದೊರೆತಿದೆ.
ಪ್ಲಾಪಳ್ಳಿಯಿಂದ ಸನ್ನಿಧಾನಂವರೆಗೆ 118 ಹೊಸ ಅಂಗಡಿಗಳ ಮರು ಹರಾಜಿಗೆ ಮಂಡಳಿ ಮುಂದಾಗಿದೆ. ಈ ನಡುವೆ ಸನ್ನಿಧಾನಂನಲ್ಲಿನ ಉನ್ನತ ಮಟ್ಟದ ಸಮಿತಿಯು ಶಬರಿಮಲೆ ಮತ್ತು ಪಂಪಾದಲ್ಲಿನ ವಿವಿಧ ವ್ಯಾಪಾರ ಸಂಸ್ಥೆಗಳ ಕೆಲಸಗಾರರ ಕೋವಿಡ್ ತಪಾಸಣೆಯನ್ನು ನೋಡಿಕೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಿದೆ. 14 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಶಬರಿಮಲೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಕೋವಿಡ್ 19 ಆಂಟಿಜೆನ್ ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಲಾಗಿದೆ.