ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ಕಳೆದ ಆರು ದಿನಗಳಿಂದ ಬೃಹತ್ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಅವರಿಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಭಾರತ, ಅವರ ಹೇಳಿಕೆ ಅನಪೇಕ್ಷಿತ ಮತ್ತು ಅನಗತ್ಯ ಎಂದಿದೆ.
ಭಾರತದ ಆಂತರಿಕ ವಿಚಾರಗಳಲ್ಲಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ ಮೂಗು ತೂರಿಸಿರುವುದು ಸರಿಯಲ್ಲ. ರಾಜಕೀಯ ಉದ್ದೇಶಗಳಿಗಾಗಿ ರಾಜತಾಂತ್ರಿಕ ಸಂಭಾಷಣೆಗಳನ್ನು ಬಳಸಿಕೊಳ್ಳಬಾರದು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತ ಒಂದು ಪ್ರಜಾತಾಂತ್ರಿಕ ದೇಶವಾಗಿದ್ದು, ಇಲ್ಲಿ ಸರ್ಕಾರಗಳೊಂದಿಗೆ ಸಮಾಜದ ವಿವಿಧ ವರ್ಗಗಳ ಭಿನ್ನಾಭಿಪ್ರಾಯ ಸಹಜ ಪ್ರಕ್ರಿಯೆ. ರೈತರ ಪ್ರತಿಭಟನೆ ಕೂಡ ಇಂತದ್ದೇ ಭಿನ್ನ ನಿಲುವಿನ ಭಾಗವಾಗಿದ್ದು, ಭಾರತ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಶಕ್ತವಾಗಿದೆ ಎಂದು ಅನುರಾಗ್ ಶ್ರೀವಾತ್ಸವ ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ರೈತರು ಹೊಸ ಕೃಷಿ ಮಸೂದೆಯನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಆತಂಕಕಾರಿಯಾಗಿದ್ದು, ನಾವು ಸ್ನೇಹಿತರು ಹಾಗೂ ಸಂಬಧಿಕರ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಕೆನಡಾ ಪ್ರಧಾನಿ ಹೇಳಿದ್ದರು.