ಉಪ್ಪಳ: ಪೈವಳಿಕೆ ಗ್ರಾ.ಪಂ.ಸದಸ್ಯನಾಗಿ ಆಯ್ಕೆಯಾದ ಝಡ್ ಎ ಕಯ್ಯಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ವ್ಯಾಪ್ತಿಯ ಭೂ ಸಂಬಂಧಿ ಸಮಸ್ಯೆ ಬಗೆಹರಿಸಲು ಗ್ರಾಮಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿರುವರು.
ಪೈವಳಿಕೆ ಪಂಚಾಯತಿ ವ್ಯಾಪ್ತಿಯ ಜೋಡುಕಲ್ಲು ಪರಿಸರದಲ್ಲಿ ಸರ್ಕಾರದ ಲೈಫ್ ಮಿಶನ್ ಯೋಜನೆಯಡಿ ಹಲವು ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಿಸಲು ನಿಧಿ ಮಂಜೂರಾಗಿದ್ದರೂ ಸ್ಥಳ ಎಲ್ಲಿದೆ ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಸರ್ಕಾರಕ್ಕೆ ಮನೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸುವಾಗ ಸಮರ್ಪಿಸಬೇಕಾದ ಸರ್ವೇ ನಂಬ್ರಗಳು ಲಭ್ಯವಿದ್ದರೂ ಆ ಸರ್ವೇ ನಂಬ್ರ ಎಲ್ಲಿ ಇದೆ ಎನ್ನುವುದನ್ನು ಆಯಾ ಗ್ರಾಮಾಧಿಕಾರಿಗಳು ನಿಗದಿಪಡಿಸಿ ಭೂ ಮಾಪನಗೈದು ಗುರುತುಹಾಕಿ ನೀಡಬೇಕಾಗುತ್ತದೆ. ಆದರೆ ಇಲ್ಲಿ ತಮಗೆ ಲಭ್ಯವಾದ ಸರ್ವೇ ನಂಬ್ರದ ಮೂಲಕ ಹಲವರು ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ಮಂಜೂರಾತಿಪಡೆದಿದ್ದರೂ ಸರ್ವೇ ನಂಬ್ರ ಎಲ್ಲಿದೆ ಎಂದು ಗುರುತು ನೀಡದ್ದರಿಂದ ಇನ್ನೂ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಝಡ್ ಎ ಕಯ್ಯಾರ್ ಅವರು ಕಯ್ಯಾರು ಗ್ರಾಮಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆಗೆ ಪರಿಹಾರ ಒದಗಿಸಲು ಒತ್ತಾಯಿಸಿದ್ದಾರೆ.