ಕಾಸರಗೋಡು: ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ಮಲೆಯಾಳಿಗರ ದಬ್ಬಾಳಿಕೆಗಳು ಇನ್ನಿಲ್ಲದಂತೆ ಅತಿಮೀರುತ್ತಿದ್ದು ಇದರಿಂದ ಕನ್ನಡಿಗರು ಸದಾ ಪರಿತಪಿಸುವಂತಾಗಿದೆ. ಇದೀಗ ಹೊಸ ಪ್ರಕರಣವೊಂದರಲ್ಲಿ ಇಲ್ಲಿಯ ಕನ್ನಡಿಗರಿಗೇ ಮೀಸಲಾಗಿದ್ದ ಮೀಸಲಾತಿಯ ಮೇಲೂ ವಕ್ರದೃಷ್ಟಿ ಬೀರುವ ಹುನ್ನಾರ ನಡೆದಿದ್ದು ತಡವಾಗಿಯಾದರೂ ಬೆಳಕಿಗೆ ಬಂದಿದೆ.
2020-21 ರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಮೆಡಿಕಲ್/ತಾಂತ್ರಿಕ ಪರೀಕ್ಷೆಯಲ್ಲಿ ಕಾಸರಗೋಡು ಗಡಿನಾಡು ಕನ್ನಡ ವಿದ್ಯಾರ್ಥಿಗಳಿಗೆ ದೊರಕಬೇಕಾದ ಸೀಟುಗಳನ್ನು ಕೆಲವು ಮಲಯಾಳಿ ವಿದ್ಯಾರ್ಥಿಗಳು ವಾಮ ಮಾರ್ಗದ ಮೂಲಕ ಮೆಡಿಕಲ್ ಸೀಟುಗಳನ್ನು ದಕ್ಕಿಸಿಕೊಂಡ ಬಗ್ಗೆ ಸಂಶಯಪಡಲಾಗಿದೆ.
1956 ಭಾಷಾವಾರು ಪ್ರಾಂತ್ಯ ವಿಂಗಡನೆಯ ನಂತರ ಕಾಸರಗೋಡಿನ ಕನ್ನಡಿಗರು ದಶಕಗಳಿಂದ ಮಲತಾಯಿ ಧೋರಣೆಯಿಂದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇಲ್ಲಿನ ಕನ್ನಡಿಗರ ನಿರಂತರ ಹೋರಾಟದ ಫಲವಾಗಿ ಕನ್ನಡ ಭಾಷೆ, ಸಂಸ್ಕøತಿ ಉಳಿದಿದೆ ಎನ್ನುವ ಸತ್ಯ ತಿಳಿಯಬೇಕಿದೆ.
ಕರ್ನಾಟಕ ಸರ್ಕಾರವು ಗಡಿನಾಡು ಕಾಸರಗೋಡು, ಮಂಜೇಶ್ವರ ಮತ್ತು ಹೊಸದುರ್ಗ ತಾಲೂಕುಗಳ ಕನ್ನಡ ವಿದ್ಯಾರ್ಥಿಗಳಿಗೆ ವೈದ್ಯಕೀಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಸಿಇಟಿ ನಡೆಸುವ ಪರೀಕ್ಷೆಯ ಮೂಲಕ ಇಲ್ಲಿನ ಅದೆಷ್ಟೋ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಅರ್ಹರಾಗಿದ್ದಾರೆ. ಇದಕ್ಕೆ ಕರ್ನಾಟಕ ಸರ್ಕಾರಕ್ಕೆ ಕನ್ನಡಿಗರು ಕೃತಜ್ಞರಾಗಿರಬೇಕು.
ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕನ್ನಡ ಗಂಧ ಗಾಳಿ ಇಲ್ಲದ ಮಲೆಯಾಳಿ ವಿದ್ಯಾರ್ಥಿಗಳು ವಾಮ ಮಾರ್ಗದ ಮೂಲಕ ಗಡಿನಾಡ ಕನ್ನಡ ಸ್ಟಡಿ ಸರ್ಟಿಫಿಕೇಟ್ ಪಡೆದು ಕನ್ನಡ ವಿದ್ಯಾರ್ಥಿಗಳಿಗೆ ಲಭಿಸಬೇಕಾದ ಸೀಟುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಬಾರಿಯ ಸಿಇಟಿ ಪರೀಕ್ಷೆಯಲ್ಲಿ ಹಲವು ಮಲೆಯಾಳಿ ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದ ಬಗ್ಗೆ ಸಂಶಯಪಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಕನ್ನಡ ಹೋರಾಟ ಸಮಿತಿ ಮನವಿಯ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರಿಗೆ ಒತ್ತಾಯಿಸಿದೆ. ವಾಮ ಮಾರ್ಗದ ಮೂಲಕ ಈ ರೀತಿಯ ವಂಚನೆ ನಡೆಯುವುದನ್ನು ತಡೆಯಲು ಮುಂದಿನ ವರ್ಷದಿಂದ ಗಡಿನಾಡು ಕಾಸರಗೋಡಿನಲ್ಲಿ 1 ರಿಂದ 10 ನೇ ತರಗತಿ ತನಕ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಮಾತ್ರ ಅರ್ಹರು ಎಂಬ ರೀತಿಯಲ್ಲಿ ಕಾನೂನು ತಿದ್ದುಪಡಿ ತರಬೇಕೆಂದು ಹೋರಾಟ ಸಮಿತಿ ಒತ್ತಾಯಿಸಿದೆ.
ಪ್ರಸ್ತುತ ವರ್ಷ ನಡೆದ ಅವ್ಯವಹಾರದ ಬಗ್ಗೆ ತೀವ್ರ ಹೋರಾಟ ನಡೆಸಲು ಕನ್ನಡ ಹೋರಾಟ ಸಮಿತಿ ತೀರ್ಮಾನಿಸಿದೆ.
ಅಭಿಮತ:
ಇಂತಹ ಘಟನೆ ತೀವ್ರ ಕಳವಳಕಾರಿಯಾಗಿದ್ದು ವಂಚನೆಯಾಗಿದೆ. ಈ ಬಗ್ಗೆ ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಸಮಗ್ರ ಮಾಹಿತಿಗಳನ್ನು ಕಲೆ ಹಾಕಲಾಗಿದ್ದು ಹೋರಾಟ ಸಮಿತಿ ಮೂಲಕ ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು.
ಭಾಸ್ಕರ ಕೆ.
ಕಾರ್ಯದರ್ಶಿ ಕನ್ನಡ ಹೋರಾಟ ಸಮಿತಿ ಕಾಸರಗೋಡು.