ಮುಳ್ಳೇರಿಯ: ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಕೀರಿಕ್ಕಾಡು ಯಕ್ಷಗಾನ ಸಾಂಸ್ಕøತಿಕ ಅಧ್ಯಯನ ಕೇಂದ್ರದಲ್ಲಿ ಭಾನುವಾರ "ಯಕ್ಷಗಾನ ಅರ್ಥ ಸೌರಭ" ಎಂಬ ನೂತನ ಪ್ರಯೋಗವನ್ನು ಅಧ್ಯಯನ ರೂಪದಲ್ಲಿ ನೆರವೇರಿಸಲಾಯಿತು.
ಸಂಘದ ಹಿರಿಯ ಭಾಗವತ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ಯಕ್ಷಗಾನ ಅರ್ಥಗಾರಿಕೆಯನ್ನು ಕೇಂದ್ರೀಕರಿಸಿ ಪ್ರಸ್ತುತಗೊಂಡ ಈ ಅರ್ಥಸೌರಭದಲ್ಲಿ ಅರ್ಥಧಾರಿಯು ಪಾತ್ರವಾಗಿ ಶ್ರುತಿಬದ್ಧವಾದ ತನ್ನ ಮಾತುಗಾರಿಕೆಯಿಂದ ಹಿತಮಿತವಾಗಿ ಪದ್ಯದ ಶಬ್ದಾರ್ಥ, ಭಾವಾರ್ಥ, ಧ್ವನ್ಯರ್ಥಗಳೆಲ್ಲದರೊಂದಿಗೆ ಅನುಸರಿಸಬೇಕಾದ ಅರ್ಥಗಾರಿಕೆಯ ಮರ್ಮದ ಮಾದರಿಯನ್ನು ಪ್ರತಿಬಿಂಬಿಸುವತ್ತ ಗಮನಹರಿಸಿ ಈ ಪ್ರಯೋಗವನ್ನು ನಡೆಸಲಾಯಿತು. ಕಲಾರಾಧನೆಯ ಹೊಸ ಪರಿಕಲ್ಪನೆಯಲ್ಲಿ ಕ್ರಮಾಗತವಾಗಿ ಸೀತಾಪಹಾರದ ಜಟಾಯು- ರಾವಣ, ಅತಿಕಾಯದ ರಾವಣ ದೂತ,ರಾಜಸೂಯಾಧ್ವರದ ಜರಾಸಂಧ, ಪಾರ್ಥಸಾರಥ್ಯದ ಶ್ರೀಕೃಷ್ಣ, ಅರ್ಜುನ, ಕೌರವ,ಕರ್ಣಾವಸಾನದ ಕರ್ಣ ಹೀಗೆ ವಿಭಿನ್ನವಾದ ಪಾತ್ರಚಿತ್ರಣವನ್ನು ಪರಂಪರಾ ಶೈಲಿಯ ಹಿಮ್ಮೇಳನದಲ್ಲಿ ಅಳವಡಿಸಲಾಯಿತು.
ಭಾಗವತರಾಗಿ ಮೋಹನ ಮೆಣಸಿನಕಾನ, ನಿತೀಶ್ ಕುಮಾರ್ ಎಂಕಣ್ಣಮೂಲೆ, ಚೆಂಡೆಮದ್ದಳೆ ವಾದನದಲ್ಲಿ ಕೆ. ಶಿವರಾಮ ಕಲ್ಲೂರಾಯ, ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣುಶರಣ ಬನಾರಿ, ಕೃಷ್ಣಪ್ರಸಾದ್ ಬೆಳ್ಳಿಪ್ಪಾಡಿ ಸಹಕರಿಸಿದರು. ಅರ್ಥಗಾರಿಕೆಯಲ್ಲಿ ನಾರಾಯಣ ಪಾಟಾಳಿ ಮಯ್ಯಾಳ (ಜಟಾಯು) ರಾಮ ನಾಯ್ಕ ದೇಲಂಪಾಡಿ (ರಾವಣ) ಯಂ. ಐತಪ್ಪ ಗೌಡ ಮುದಿಯಾರು (ಅತಿಕಾಯದ ರಾವಣ) ರಜತ್ ಡಿ.ಆರ್ (ದೂತ ಮತ್ತು ಅರ್ಜುನ) ಯಂ. ರಮಾನಂದ ರೈ ದೇಲಂಪಾಡಿ (ಜರಾಸಂಧ) ಡಿ.ವೆಂಕಟ್ರಮಣ ಮಾಸ್ತರ್ ದೇಲಂಪಾಡಿ(ಶ್ರೀ ಕೃಷ್ಣ) ನಾರಾಯಣ ದೇಲಂಪಾಡಿ (ಕೌರವ) ಗೋಪಾಲಕೃಷ್ಣ ರೈ ಮುದಿಯಾರು (ಕರ್ಣ) ಸಹಕರಿಸಿದರು.
ಅವ್ಯಕ್ತ ವಿನೋದ ಬನಾರಿ ಮತ್ತು ಮನೆಯವರಿಂದ ಸೇವಾರೂಪವಾಗಿ ಮೂಡಿಬಂದ ಈ ಕಾರ್ಯಕ್ರಮದ ಮೊದಲಿಗೆ ಸ್ಥಳಸಾನ್ನಿಧ್ಯ ಶ್ರೀ ಗೋಪಾಲಕೃಷ್ಣ ಸ್ವಾಮಿಗೆ ವಿಶೇಷ ಪೂಜಾರ್ಚನೆ ಸಲ್ಲಿಸಲಾಯಿತು. ಸರೋಜಿನಿ ಬನಾರಿ ಸ್ವಾಗತಿಸಿ, ಲತಾ ಆಚಾರ್ಯ ಬನಾರಿ ವಂದಿಸಿದರು. ನಾರಾಯಣ ದೇಲಂಪಾಡಿ ನಿರೂಪಿಸಿದರು.