ನವದೆಹಲಿ: ಈ ವರ್ಷ ಮತ್ತು ಈ ದಶಕದ ಕೊನೆಯ ಸೂರ್ಯಗ್ರಹಣ ಸೋಮವಾರ ಸಂಭವಿಸುತ್ತಿದೆ. ಆಕಾಶದ ವಿಸ್ಮಯಗಳ ಬಗ್ಗೆ ಆಸಕ್ತಿ ಉಳ್ಳವರಿಗೆ ಮತ್ತೊಂದು ವಿಶೇಷ ಅನುಭವಕ್ಕೆ ಸೂರ್ಯಗ್ರಹಣ ಅವಕಾಶ ನೀಡುತ್ತಿದೆ. ಆದರೆ ಈ ಭಾಗ್ಯ ಭಾರತೀಯರಿಗೆ ಇಲ್ಲ. ಏಕೆಂದರೆ ದಶಕದ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಿಲ್ಲ.
ಸೂರ್ಯನ ಸುತ್ತ ಸುತ್ತುವ ಸಮಯ ಮತ್ತು ತನ್ನ ಕಕ್ಷೆಯಲ್ಲಿನ ಭೂಮಿಯ ಚಲನೆಯ ಕಾರಣದಿಂದ ಗ್ರಹಣದ ಸಮಯದಲ್ಲಿ ಭಾರತದ ಭಾಗ ಅದಕ್ಕೆ ಎದುರಾಗುವುದಿಲ್ಲ. ಹೀಗಾಗಿ ಭಾರತಕ್ಕೆ ಗ್ರಹಣದ ಗೋಚರ ಹಾಗೂ ಪ್ರಭಾವ ಆಗುವುದಿಲ್ಲ. ಇದು ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ಸೂರ್ಯನನ್ನು ಚಂದ್ರ ಪೂರ್ಣವಾಗಿ ಆವರಿಸುತ್ತದೆ. ಸೂರ್ಯನಿಂದ ಬರುವ ಬೆಳಕನ್ನು ಪೂರ್ತಿಯಾಗಿ ತಡೆಯುತ್ತದೆ. ಇದರಿಂದ ಗ್ರಹಣ ಉಂಟಾಗುವ ಪ್ರದೇಶಗಳಲ್ಲಿ ಕತ್ತಲೆಯ ವಾತಾವರಣ ನಿರ್ಮಾಣವಾಗಲಿದೆ.
ಗ್ರಹಣವು ಸುಮಾರು ಐದು ಗಂಟೆ ಇರಲಿದೆ. ಭಾರತೀಯ ಕಾಲಮಾನ ಪ್ರಕಾರ ಸಂಜೆ 7.03ಕ್ಕೆ ಆರಂಭವಾಗುವ ಗ್ರಹಣ ರಾತ್ರಿ 9.43ರ ವೇಳೆಗೆ ಪೂರ್ಣವಾಗಿ ಸಂಭವಿಸುತ್ತದೆ. ಡಿಸೆಂಬರ್ 15ರ ರಾತ್ರಿ 12.23ರ ವೇಳೆಗೆ ಗ್ರಹಣ ಮುಕ್ತಾಯವಾಗುತ್ತದೆ. ಗ್ರಹಣವು ಅಮೆರಿಕದ ದಕ್ಷಿಣ ಭಾಗಗಳಲ್ಲಿ ಗೋಚರಿಸುತ್ತದೆ. ಚಿಲಿ ಮತ್ತು ಅರ್ಜೆಂಟೀನಾಗಳಲ್ಲಿ ಎರಡು ನಿಮಿಷ ಮತ್ತು ಹತ್ತು ಸೆಕೆಂಡುಗಳಷ್ಟು ಕಾಲ ಗ್ರಹಣ ಕಾಣಿಸಿಕೊಳ್ಳಬಹುದು. ದಕ್ಷಿಣ ಅಮೆರಿಕದ ದಕ್ಷಿಣ ಭಾಗ, ನೈಋತ್ಯ ಆಫ್ರಿಕಾ ಮತ್ತು ಅಂಟಾರ್ಕ್ಟಿಕಾಗಳಲ್ಲಿ ಕೂಡ ಇದು ಗೋಚರಿಸಬಹುದು.
ಸೂರ್ಯಗ್ರಹಣ ಜಗತ್ತಿನ ಬಹುತೇಕ ಭಾಗಗಳಲ್ಲಿ ಕಾಣಿಸಿಕೊಳ್ಳದೆ ಇದ್ದರೂ ಅದನ್ನು ನೋಡುವ ಅವಕಾಶವಂತೂ ಸಿಗಲಿದೆ. ಅಮೆರಿಕದ ನಾಸಾ ಸೂರ್ಯಗ್ರಹಣದ ಪ್ರತಿಕ್ರಿಯೆಯನ್ನು ನೇರ ಪ್ರಸಾರ ಮಾಡಿದೆ.
ಭಾರತದಲ್ಲಿ ಮುಂದಿನ ಸೂರ್ಯಗ್ರಹಣ 2021ರ ಜೂನ್ 10ರಂದು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಇದು ಪೂರ್ಣ ಸೂರ್ಯಗ್ರಹಣವಾಗಿರುವುದಿಲ್ಲ. ಚಂದ್ರನು ಸಂಪೂರ್ಣವಾಗಿ ಸೂರ್ಯನನ್ನು ಮುಚ್ಚುವುದಿಲ್ಲ. ಅಂದಹಾಗೆ ಭಾರತದಲ್ಲಿ ಸಂಪೂರ್ಣ ಸೂರ್ಯಗ್ರಹಣ ವೀಕ್ಷಿಸಲು ಇನ್ನೂ 4,843 ದಿನ ಕಾಯಬೇಕು! ಭಾರತದಲ್ಲಿ ಮುಂದಿನ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುವುದು 2034ರ ಮಾರ್ಚ್ 20ರಂದು.