ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಅಂಗವಾಗಿ ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅನೇಕ ಸ್ಥಳಗಳಲ್ಲಿ ಮತ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮತದಾನ ತಡವಾಗಿ ಪ್ರಾರಂಭವಾಯಿತು.
ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಬೂತ್ ನಂಬರ್ ಒಂದರಲ್ಲಿ 22 ಜನರು ಮತ ಚಲಾಯಿಸಿದ ಬಳಿಕ ಹಠಾತ್ತಾಗಿ ಮತಯಂತ್ರ ಕಾರ್ಯ ಸ್ಥಗಿತಗೊಳಿಸಿತು. ಬಳಿಕ ಬದಲಿ ವ್ಯವಸ್ಥೆ ಕಲ್ಪಿಸಿ 20 ನಿಮಿಷಗಳಷ್ಟು ತಡವಾಗಿ ಮತದಾನ ಪುನರಾರಂಭಗೊಂಡಿತು.
ಮತಯಂತ್ರ ವೈಫಲ್ಯದಿಂದಾಗಿ ಕುಂಬಳೆ ವೆಲ್ಪೇರ್ ಶಾಲಾ ಮತಗಟ್ಟೆಯ ಬೂತ್ ಸಂಖ್ಯೆ 2 ರಲ್ಲಿ ಒಂದು ಗಂಟೆ ವಿಳಂಬವಾಗಿ ಮತದಾನ ಆರಂಭಗೊಂಡಿತು. ಪೇರಾಲು ಶಾಲೆಯ ಬೂತ್ ನಂಬರ್ ಒಂದರಲ್ಲಿ ಮುಕ್ಕಾಲು ಗಂಟೆಗಳಷ್ಟು ತೆಡವಾಗಿ ಮತದಾನ ಆರಂಭಿಸಲಾಯಿತು. ದೇಲಂಪಾಡಿ ಪಂಚಾಯತಿಯ ಒಂಬತ್ತನೇ ವಾರ್ಡ್ ಕಾಟ್ಟಿಪಾರ ಬೂತ್‍ನಲ್ಲಿರುವ ಜಿಲ್ಲಾ ಪಂಚಾಯತಿ ವಿಭಾಗದ ಮತಯಂತ್ರ ಸ್ಥಗಿತದಿಂದಾಗಿ ಕಾಲು ಗಂಟೆ ತಡವಾಗಿ ಮತದಾನ ಆರಂಭಿಸಲಾಯಿತು. ಕಿನ್ನಿಂಗಾರ್ ಹಾಗೂ ಗಡಿ ಗ್ರಾಮ ಎಣ್ಮಕಜೆಯ ಬಾಳೆಮೂಲೆಯಲ್ಲಿ ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ತಡವಾಗಿ ಮತದಾನ ಆರಂಭಿಸಲಾಯಿತು.
ಮೊಗ್ರಾಲ್ ಪುತ್ತೂರು ಪಂಚಾಯತಿಯ ಕಲ್ಲಂಗೈ ವಾರ್ಡ್‍ನಲ್ಲಿನ ಮತ ಯಂತ್ರವೂ ಅಸಮರ್ಪಕ ಕಾರ್ಯದಿಂದಾಗಿ ವಿಳಂಬವಾಯಿತು. ಚೆಂಗಳ ಪಂಚಾಯತಿಯ ತೈವಳಪ್ಪು ರೌಲತುಲ್ ಇಸ್ಲಾಂ ಮದ್ರಸಾದಲ್ಲಿ ಬೂತ್ ನಂಬರ್ 2 ಮತ್ತು ಎಣ್ಮಕಜೆ ಪಂಚಾಯತಿಯ ಬಾಳೆಮೂಲೆ ಎಲ್‍ಪಿ ಶಾಲೆಯ ಬೂತ್ ನಂಬರ್ ಒನ್ ನಲ್ಲಿ ಮತದಾನ ಪ್ರಕ್ರಿಯೆ ಸ್ವಲ್ಪ ಸಮಯದವರೆಗೆ ಅಸ್ತವ್ಯಸ್ತಗೊಂಡಿತ್ತು.